ವಿದ್ಯುತ್ ದರ ಏರಿಕೆ : ಪ್ರತಿ ಯೂನಿಟ್‌ಗೆ ೩೫ ಪೈಸೆ ಹೆಚ್ಚಳ

ಬೆಂಗಳೂರು, ಏ. ೪: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಈಗ ವಿದ್ಯುತ್ ದರ ಏರಿಕೆ ಶಾಕ್ ನೀಡಿದ್ದು, ಪ್ರತಿ ಯೂನಿಟ್‌ಗೆ ೩೫ ಪೈಸೆ ಹೆಚ್ಚಳ ಮಾಡಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಪ್ರತಿ ಯೂನಿಟ್‌ಗೆ ೩೫ ಪೈಸೆ ಹೆಚ್ಚಳ ಮಾಡಿದ್ದು, ಏಪ್ರಿಲ್ ೧ ರಿಂದಲೇ ಈ ಪರಿಷ್ಕೃತ ವಿದ್ಯುತ್ ದರ ಜಾರಿಗೆ ಬರಲಿದೆ. ಬೆಸ್ಕಾಂ, ಹೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಎಲ್ಲಾ ನಿಗಮಗಳಲ್ಲೂ ೩೫ ಪೈಸೆ ಹೆಚ್ಚಳ ಮಾಡಲಾಗಿದೆ. ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಳವಾಗಿದೆ. ಫಿಕ್ಸೆಡ್ ದರವನ್ನು ೧೦ ರಿಂದ ೩೦ ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ. ೨೦೨೨-೨೩ನೇ ಆರ್ಥಿಕ ವರ್ಷದಲ್ಲಿ ಉಂಟಾಗುವ ಆದಾಯ ಕೊರತೆಯ ಮೊತ್ತ ೨೧೫೯.೪೮ ಕೋಟಿ ರೂ.ಗಳನ್ನು ಮರು ಪಡೆಯಲು ದರ ಹೆಚ್ಚಳ ಅನಿವಾರ್ಯವಾಗಿದೆ. ಸದರಿ ಮೊತ್ತವು ಆರ್ಥಿಕ ವರ್ಷ ೨೦೨೦-೨೧ರ ಕೊರತೆಯ ಮೊತ್ತ ರೂ. ೧೭೦೦.೪೯ ಕೋಟಿ ರೂ.ಗಳನ್ನು ಒಳಗೊಂಡಿರುತ್ತದೆ ಎಂದು ಕೆಇಆರ್‌ಸಿ ಹೇಳಿದೆ.

ಪಾಕ್ ಹಂಗಾಮಿ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್

ಇಸ್ಲಾಮಾಬಾದ್, ಏ. ೪: ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆ ನಡುವೆ ಹಂಗಾಮಿ ಪ್ರಧಾನಿ ಹುದ್ದೆಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಇಮ್ರಾನ್ ಖಾನ್ ಅವರು ಸೋಮವಾರ ನಾಮ ನಿರ್ದೇಶನ ಮಾಡಿದ್ದಾರೆ. ಪಕ್ಷದ ಕೋರ್ ಕಮಿಟಿಯ ಅನುಮೋದನೆಯ ನಂತರ ಹಂಗಾಮಿ ಪ್ರಧಾನಿ ಹುದ್ದೆಗೆ ಗುಲ್ಜಾರ್ ಅಹ್ಮದ್ ಅವರನ್ನು ನಾಮನಿರ್ದೇಶನ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕ್ ಮಾಜಿ ಮಾಹಿತಿ ಸಚಿವ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಹಿರಿಯ ನಾಯಕ ಫವಾದ್ ಚೌಧರಿ ಅವರು ಹೇಳಿದ್ದಾರೆ. ಪಾಕ್ ಅಧ್ಯಕ್ಷ ಆರಿಫ್ ಅಲ್ವಿ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸಂವಿಧಾನದ ಪರಿಚ್ಛೇದ ೨೨೪-ಎ(೪)ರ ಅಡಿಯಲ್ಲಿ ಹಂಗಾಮಿ ಪ್ರಧಾನಿ ನೇಮಕವಾಗುವವರೆಗೆ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರದಲ್ಲಿ ಮುಂದು ವರಿಯಲಿದ್ದಾರೆ ಎಂದು ತಿಳಿಸಲಾಗಿದೆ. ಅಧ್ಯಕ್ಷ ಆರಿಫ್ ಅಲ್ವಿ ಅವರು ಪ್ರಧಾನಿ ಖಾನ್ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರಿಗೆ ಹಂಗಾಮಿ ಪ್ರಧಾನಿ ಹುದ್ದೆಗೆ ಹೆಸರುಗಳನ್ನು ಪ್ರಸ್ತಾಪಿಸುವಂತೆ ಪತ್ರ ಬರೆದು ಕೇಳಿದ್ದಾರೆ. ಸಂವಿಧಾನದ ಪ್ರಕಾರ ರಾಷ್ಟಿçÃಯ ಅಸೆಂಬ್ಲಿ(ಎನ್‌ಎ) ಮತ್ತು ಫೆಡರಲ್ ಕ್ಯಾಬಿನೆಟ್ ಅನ್ನು ಭಾನುವಾರ ವಿಸರ್ಜನೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪಾಕಿಸ್ತಾನದ ಸಂವಿಧಾನದ ಆರ್ಟಿಕಲ್ ೨೨೪-೦(೧) ರ ಪ್ರಕಾರ ವಿಸರ್ಜನೆಗೊಂಡಿರುವ ರಾಷ್ಟಿçÃಯ ಅಸೆಂಬ್ಲಿಯಲ್ಲಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಹಂಗಾಮಿ ಪ್ರಧಾನಿಯನ್ನು ಅಧ್ಯಕ್ಷರು ನೇಮಕ ಮಾಡುತ್ತಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ವಿನಯ್ ಮೋಹನ್ ಕ್ವಾತ್ರಾ

ನವದೆಹಲಿ, ಏ. ೪: ನೇಪಾಳದಲ್ಲಿ ಭಾರತದ ರಾಯಭಾರಿಯಾಗಿರುವ ವಿನಯ್ ಮೋಹನ್ ಕ್ವಾತ್ರಾ ಅವರನ್ನು ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಪ್ರಸ್ತುತ ಹರ್ಷವರ್ಧನ್ ಶೃಂಗ್ಲಾ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತಿಂಗಳಾAತ್ಯದಲ್ಲಿ ಕಚೇರಿಯಿಂದ ನಿರ್ಗಮಿಸಲಿದ್ದಾರೆ. ಕ್ಯಾಬಿನೆಟ್ ನೋಟ್‌ನ ನೇಮಕಾತಿ ಸಮಿತಿಯು ಕಠ್ಮಂಡುವಿನಲ್ಲಿ ರಾಯಭಾರಿಯಾಗಿದ್ದ ಶ್ರೀ ವಿನಯ್ ಮೋಹನ್ ಕ್ವಾತ್ರಾ (ಐಎಫ್ ಎಸ್: ೧೯೮೮) ಅವರನ್ನು ೩೦.೦೪ ರಂದು ಶ್ರೀ ಹರ್ಷವರ್ಧನ್ ಶೃಂಗ್ಲಾ (ಐಎಫ್ ಎಸ್: ೧೯೮೪) ಅವರ ನಿವೃತ್ತಿಯ ನಂತರ ೨೦೨೨ರ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಅನುಮೋದನೆ ನೀಡಿದೆ ಎಂದು ಹೇಳಿದೆ.

ಶ್ರೀನಗರದ ಲಾಲ್ ಚೌಕ್‌ನಲ್ಲಿ ಉಗ್ರ ದಾಳಿ : ಓರ್ವ ಯೋಧ ಹುತಾತ್ಮ

ಶ್ರೀನಗರ, ಏ. ೪: ಶ್ರೀನಗರದ ಲಾಲ್ ಚೌಕ್‌ನಲ್ಲಿ ಭಯೋತ್ಪಾದಕರು ಸೋಮವಾರ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಭಯೋತ್ಪಾದಕರ ದಾಳಿ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಇದೇ ವೇಳೆ ಮತ್ತೊಬ್ಬರು ಗಾಯಗೊಂಡಿದ್ದಾರೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ದಾಳಿಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ಭದ್ರತಾ ಪಡೆ ಸ್ಥಳಕ್ಕೆ ದೌಡಾಯಿಸಿದರು. ಸ್ಥಳದಲ್ಲಿ ತೀವ್ರ ನಿಗಾ ಇರಿಸಿರುವ ಭದ್ರತಾ ಪಡೆಗಳು, ಭಯೋತ್ಪಾದಕರ ಪತ್ತೆಗಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ದಾಳಿಗೆ ಮುನ್ನ ಇಂದು ಮುಂಜಾನೆ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತೊಮ್ಮೆ ಇಬ್ಬರು ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವ ಘಟನೆ ನಡೆದಿದೆ. ಪುಲ್ವಾಮಾದ ಲಾಜೋರಾದಲ್ಲಿ ಉಗ್ರರು ಗುಂಡು ಹಾರಿಸಿ ಇಬ್ಬರನ್ನು ಗಾಯಗೊಳಿಸಿದ್ದಾರೆ. ಗಾಯಗೊಂಡ ಇಬ್ಬರನ್ನೂ ಎಸ್‌ಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ವಲಸೆ ನಿವಾಸಿಗಳು ಎಂದು ಹೇಳಲಾಗಿದೆ. ಇನ್ನು ಭಾನುವಾರ ಸಂಜೆ ಪುಲ್ವಾಮಾ ಜಿಲ್ಲೆಯ ಲಿಟ್ಟರ್ ಪ್ರದೇಶದಲ್ಲಿ ಕೋಳಿ ಗಾಡಿಯನ್ನು ತಂದಿದ್ದ ಇಬ್ಬರು ಕಾಶ್ಮೀರೇತರರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಗಾಯಗೊಂಡಿರುವ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪಂಜಾಬ್‌ನ ಪಠಾಣ್‌ಕೋಟ್ ನಿವಾಸಿಗಳು ಎಂದು ತಿಳಿದುಬಂದಿದೆ.

ಗೋರಖ್‌ನಾಥ ದೇವಸ್ಥಾನ ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ!

ಗೋರಖ್‌ಪುರ (ಉತ್ತರಪ್ರದೇಶ), ಏ. ೪: ಗೋರಖ್ ನಾಥ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ವ್ಯಕ್ತಿಯೊಬ್ಬ ಇಬ್ಬರು ಪಿಎಸಿ ಕಾನ್‌ಸ್ಟೆಬಲ್ ಗಳ ಮೇಲೆ ಆಯುಧಗಳಿಂದ ಹಲ್ಲೆ ನಡೆಸಿ ದೇವಸ್ಥಾನದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಗೋರಖ್ ಪುರ ನಿವಾಸಿ ಮುರ್ತಾಜಾ ಎಂದು ಗುರುತಿಸಲಾಗಿದ್ದು, ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿಯು ಆಯುಧ ದೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸುವ ವೇಳೆ ನಮ್ಮ ಇಬ್ಬರು ಪ್ರಾಂತೀಯ ಸಶಸ್ತç ಕಾನ್‌ಸ್ಟಾಬ್ಯುಲರಿ(ಪಿಎಸಿ) ಕಾನ್‌ಸ್ಟೆಬಲ್ ಗಳು ಗಾಯ ಗೊಂಡಿದ್ದಾರೆ. ಗಾಯಗೊಂಡ ಕಾನ್‌ಸ್ಟೆಬಲ್ ಗಳಾದ ಗೋಪಾಲ್ ಕುಮಾರ್ ಗೌರ್ ಮತ್ತು ಅನಿಲ್ ಪಾಸ್ವಾನ್ ಅವರಿಗೆ ಗುರು ಗೋರಖ್‌ನಾಥ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಿಆರ್ ಡಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಅಲ್ಲಾಹು ಅಕ್ಬರ್ ಎಂಬ ಧಾರ್ಮಿಕ ಘೋಷಣೆ ಕೂಗಿ ನಂತರ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಅವರು ಗೇಟ್ ಬಳಿಯಿರುವ ಪಿಎಸಿ ಪೋಸ್ಟ್ಗೆ ಹೋಗಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಗೋರಖ್‌ಪುರ ವಲಯದ ಎಡಿಜಿ, ಅಖಿಲ್ ಕುಮಾರ್ ಹೇಳಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಾಗ್ಗೆ ಈ ಪ್ರದೇಶಕ್ಕೆ ಭೇಟಿ ನೀಡುವುದರಿಂದ ಭಯೋತ್ಪಾದನಾ ಕೃತ್ಯ ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂದ ಎಡಿಜಿ ಅವರು ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ಮಾಡಿದ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಏತನ್ಮಧ್ಯೆ, ಉತ್ತರ ಪ್ರದೇಶ ಸರ್ಕಾರವು ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಹಸ್ತಾಂತರಿಸಲು ನಿರ್ಧರಿಸಿದೆ. 'ಘಟನೆಯಲ್ಲಿ ಭಯೋತ್ಪಾದನೆಯ ಕೃತ್ಯವೆಂಬುದನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲದ ಕಾರಣ ಪ್ರಕರಣವನ್ನು ಎಟಿಎಸ್ ಗೆ ವರ್ಗಾಯಿಸಲಾಗಿದೆ ಮತ್ತು ವಿಸ್ತೃತ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವಿಪಿನ್ ತಾಡಾ, ಎಸ್‌ಎಸ್‌ಪಿ ಗೋರಖ್‌ಪುರ ತಿಳಿಸಿದರು.

ಬಿಎಸ್‌ಎಫ್‌ನಿಂದ ಪಾಕಿಸ್ತಾನದ ದೋಣಿ ವಶಕ್ಕೆ

ಅಹಮದಾಬಾದ್, ಏ. ೪: ಗುಜರಾತ್‌ನ ಕಚ್ ಜಿಲ್ಲೆಯ ಅರಬ್ಬಿ ಸಮುದ್ರದ ಬಳಿ ಪಾಕಿಸ್ತಾನದ ದೋಣಿಯೊಂದನ್ನು ಬಿಎಸ್‌ಎಫ್ ವಶಪಡಿಸಿಕೊಂಡಿದೆ. ಆದರೆ, ಬೋಟ್‌ನಲ್ಲಿದ್ದ ಮೀನುಗಾರರು ಇನ್ನೊಂದು ಬೋಟ್‌ನಿಂದ ಪಾಕಿಸ್ತಾನದ ಕಡೆಗೆ ಪರಾರಿಯಾಗಿದ್ದಾರೆ. ಭಾರತದ ಗಡಿಯೊಳಗೆ ಸುಮಾರು ೧೦೦ ಮೀಟರ್ ದೂರದಲ್ಲಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ನಂತರ ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ. ಈ ದೋಣಿಯಲ್ಲಿ ಮೀನುಗಾರಿಕಾ ಬಲೆಗಳು ಮತ್ತು ಇತರ ಉಪಕರಣಗಳನ್ನು ಹೊರತುಪಡಿಸಿ ಅನುಮಾನಾಸ್ಪದ ವಸ್ತುಗಳು ಏನೂ ಕಂಡುಬAದಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಬಿಎಸ್‌ಎಫ್ ತಂಡ ಗಸ್ತು ತಿರುಗುತ್ತಿತ್ತು. ಈ ವೇಳೆ ಎರಡು ಪಾಕಿಸ್ತಾನದ ಬೋಟ್‌ಗಳು ಭಾರತದ ಭೂಪ್ರದೇಶ ಪ್ರವೇಶಿಸುತ್ತಿರುವುದು ಕಂಡುಬAದಿದೆ. ಇದಾದ ನಂತರ ಬಿಎಸ್‌ಎಫ್ ಗಸ್ತು ತಂಡ ತಕ್ಷಣವೇ ಸ್ಥಳಕ್ಕೆ ತಲುಪಿ, ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಜಪ್ತಿ ಮಾಡಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.