ಗೋಣಿಕೊಪ್ಪಲು, ಏ.೪: ಹುಲಿಯ ಹೆಜ್ಜೆ ಗುರುತು ಅರಸಿ ಹೊರಟ ಕಾರ್ಯಾಚರಣೆ ತಂಡಕ್ಕೆ ನಿರಾಸೆಯುಂಟಾಗಿದೆ.
ಬಿಸಿಲನ್ನು ಲೆಕ್ಕಿಸದೆ ಕಳೆದ ಏಳು ದಿನಗಳಿಂದ ಹಗಲು ರಾತ್ರಿ ಎನ್ನದೇ ಅರಣ್ಯ ಪ್ರದೇಶವನ್ನು ಜಾಲಾಡಿದ ತಂಡಕ್ಕೆ ಭಾನುವಾರ ಕೂಡ ದಿನಪೂರ್ತಿ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಸಿಗಲಿಲ್ಲ.
ಕಳೆದ ೭ ದಿನದಿಂದ ಕಾರ್ಯಾಚರಣೆ ನಡೆಯುತ್ತಿದೆ, ಪ್ರತಿದಿನ ಹುಲಿಯ ಹೆಜ್ಜೆ ಗುರುತು ಹಲವೆಡೆ ಕಂಡು ಬಂದಿದ್ದವು, ಅಲ್ಲದೇ ಗ್ರಾಮಸ್ಥರು ಹುಲಿಯ ಕೂಗು ಕೇಳಿತೆಂಬ ಮಾಹಿತಿ ನೀಡುತ್ತಿದ್ದರು. ಕಾರ್ಯಾಚರಣೆ ತಂಡ ಐದು ಭಾಗಗಳಾಗಿ ಹುಡುಕಾಟ ನಡೆಸಿತು. ಆದರೆ ಭಾನುವಾರ ನಡೆದ ಕಾರ್ಯಾಚರಣೆಯಿಂದ ಯಾವುದೇ ಫಲಿತಾಂಶ ಬರಲಿಲ್ಲ. ಹುಲಿಯು ಸಿಗಲಿದೆ ಎಂಬ ಆಶಾ ಭಾವನೆಯಲ್ಲಿದ್ದ ಕಾರ್ಯಾಚರಣೆ ತಂಡಕ್ಕೆ ಇದೀಗ ಹುಲಿಯ ಯಾವುದೇ ಸುಳಿವು ಸಿಗದಿರುವುದು ಬೇಸರ ತಂದಿದೆ.
ಇತ್ತ ಹಿರಿಯ ಅಧಿಕಾರಿಗಳು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.
ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ಡಿಎಫ್‌ಒ ಶಿವರಾಂ ಬಾಬು, ಮಡಿಕೇರಿ ಡಿಎಫ್‌ಒ ಎ.ಟಿ.ಪೂವಯ್ಯ, ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ, ತಿತಿಮತಿ ವಲಯದ ಎಸಿಎಫ್ ಉತ್ತಪ್ಪ, ಆರ್.ಎಫ್.ಒ. ಅಶೋಕ್ ಹುನಗುಂದ, ದಿವಾಕರ್ ಸೇರಿದಂತೆ ಅನೇಕ ಅಧಿಕಾರಿಗಳು ಕ್ಯಾಂಪ್ ನಲ್ಲಿ ಉಳಿದುಕೊಂಡು ಕಾರ್ಯಾಚರಣೆಗೆ ರೂಪುರೇಷೆ ಕೈಗೊಂಡಿದ್ದಾರೆ.
ಕಾರ್ಮಿಕರ ಹಿಂದೇಟು..!
ಬಿಟ್ಟAಗಾಲ ಸಮೀಪದ ೧ ನೇ ರುದ್ರಗುಪ್ಪೆ,ಬಿ.ಶೆಟ್ಟಿಗೇರಿ ಭಾಗದ ಕೊಂಗಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕಾಫಿ ತೋಟದಲ್ಲಿ ಕರಿ ಮೆಣಸು ಕುಯ್ಯಲು ಆಗಮಿಸುತ್ತಿದ್ದ ಕಾರ್ಮಿಕರು ಇದೀಗ ಈ ಭಾಗದ ಬೆಳೆಗಾರರ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ತೋಟಕ್ಕೆ ತೆರಳುವ ವೇಳೆ ಕಾರ್ಮಿಕರು ತಂಡ, ತಂಡವಾಗಿ ತೆರಳುವಂತೆ ಸೂಚನೆ ನೀಡಿದ್ದಾರೆ. ಹುಲಿಯ ಬಗ್ಗೆ ಯಾವುದಾದರೂ ಸುಳಿವು ಕಂಡಲ್ಲಿ ಕೂಡಲೇ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ.