ಮಡಿಕೇರಿ, ಏ. ೪: ತಾ. ೧ ರಂದು ಜಿಲ್ಲೆಯಲ್ಲಿ ಹಠಾತ್ ಆಗಿ ಕಡಿತಗೊಂಡ ವಿದ್ಯುತ್ ಸಂಪರ್ಕ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಸಂಜೆಯಿAದ ರಾತ್ರಿ ತನಕ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಜನತೆ ಸಮಸ್ಯೆ ಎದುರಿಸಬೇಕಾಯಿತು. ಯುಗಾದಿ ಸಂಭ್ರಮಕ್ಕೆ ‘ಪವರ್ ಕಟ್’ ಅಡ್ಡಿಯಾಯಿತು. ನಾಳೆ ತನಕ ಕತ್ತಲು ನಿಶ್ಚಿತ. ಹಬ್ಬ ಆಚರಿಸುವುದಾದರು ಹೇಗೆ? ಎಂಬ ಪ್ರಶ್ನೆಗಳು ಸಹಜವಾಗಿ ಎದ್ದಿದ್ದವು. ವಿದ್ಯುತ್ ಇಲಾಖೆ ಅಧಿಕಾರಿಗಳು ಕೂಡ ೨೪ ಗಂಟೆ ವಿದ್ಯುತ್ ಇರುವುದಿಲ್ಲ ಎಂದು ಹೇಳಿದ್ದರು. ಇವೆಲ್ಲದರ ನಡುವೆ ಇಲಾಖೆಯ ಶ್ರಮದಿಂದ ಮಧ್ಯರಾತ್ರಿಯೇ ಜಿಲ್ಲೆಯಲ್ಲಿ ಬೆಳಕು ಕಂಡಿತು.

ಹೌದು.. ತಾ. ೧ ರಂದು ದಿಡೀರ್ ವಿದ್ಯುತ್ ಅಡಚಣೆಗೆ ಕಾರಣದ ಬಗ್ಗೆ ಹಲವರಲ್ಲಿ ಕುತೂಹಲವಿದೆ. ಹುಣಸೂರು ಬಳಿಯ ಬಸ್ತಿಪುರದಲ್ಲಿ ವಿದ್ಯುತ್ ಸಮಸ್ಯೆಯಾದರೆ ಕೊಡಗಿನಲ್ಲಿ ಕಗ್ಗತ್ತಲು ಆವರಿಸಲು ಕಾರಣವೇನೆಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಈ ತಾಂತ್ರಿಕ ಸಮಸ್ಯೆ ಹಿಂದಿನ ಕಾರಣದ ಬಗ್ಗೆ ‘ಶಕ್ತಿ’ ಪ್ರಶ್ನಿಸಿದಾಗ ಕೆ.ಪಿ.ಟಿ.ಸಿ.ಎಲ್. ನೋಡೆಲ್ ಅಧಿಕಾರಿ ಪ್ರಶಾಂತ್ ಉತ್ತರ ನೀಡಿದ್ದಾರೆ.

ಟವರ್‌ನಲ್ಲಿ ಸಮಸ್ಯೆ

ಮೈಸೂರಿನ ಕೂರ್ಗಳ್ಳಿ ಇಂಡಸ್ಟಿçಯಲ್ ಏರಿಯಾ ಮೂಲಕ ಹುಣಸೂರು ಸಮೀಪದ ಬಸ್ತಿಪುರದಿಂದ ಪಿರಿಯಾಪಟ್ಟಣ, ಕೆ.ಆರ್.ನಗರ ತಾಲೂಕು, ಬಿಳಿಕೆರೆ ವ್ಯಾಪ್ತಿ ಹಾಗೂ ಕೊಡಗು ಜಿಲ್ಲೆಗೆ ವಿದ್ಯುತ್ ಸಂಪರ್ಕ (ಮೊದಲ ಪುಟದಿಂದ) ಕಲ್ಪಿಸುವ ೨೨೦ ಕೆ.ವಿ. ವಿದ್ಯುತ್ ಟವರ್‌ಗೆ ಅಂದು ಸುರಿದ ಭಾರಿ ಗಾಳಿ ಸಹಿತ ಮಳೆಗೆ ಹಾನಿಯಾಯಿತು.

ಟವರ್‌ನ ತುತ್ತತುದಿಯ ಭಾಗ ತುಂಡಾಗಿ ಬಾಗಿದ ಪರಿಣಾಮ ಬಸ್ತಿಪುರದಿಂದ ಸಂಪರ್ಕ ಹೋಗಿರುವ ಎಲ್ಲಾ ಪ್ರದೇಶಗಳಲ್ಲಿಯೂ ವಿದ್ಯುತ್ ವ್ಯತ್ಯಯಗೊಂಡಿತು. ಇದರಿಂದ ಸುಮಾರು ೪ ರಿಂದ ೫ ಗಂಟೆ ಜಿಲ್ಲೆಯ ಎಲ್ಲಿಯೂ ವಿದ್ಯುತ್ ಸಂಪರ್ಕ ಇರಲಿಲ್ಲ. ರಾತ್ರಿ ೯.೩೦ರ ಸುಮಾರಿಗೆ ಸಿಬ್ಬಂದಿಗಳ ಅವಿರತ ಶ್ರಮದಿಂದ ವಿದ್ಯುತ್ ಬಂತಾದರೂ ಕೆಲಸಮಯದಲ್ಲಿಯೇ ತಾಂತ್ರಿಕ ಸಮಸ್ಯೆ ಎದುರಾಗಿ ಮತ್ತೆ ‘ಪವರ್ ಕಟ್’ ಆಗಿದೆ. ಕರೆಂಟ್ ಬಂದ ಖುಷಿಯಲ್ಲಿದ್ದ ಜನತೆ ಮತ್ತೆ ಇದರಿಂದ ನಿರಾಸೆ ಅನುಭವಿಸುವಂತಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ನಾಳೆ ತನಕ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಸಾಧ್ಯ ಎಂಬ ಸಂದೇಶಗಳು ಹರಿದಾಡುತ್ತಿದ್ದವು. ಮರುದಿನ ಯುಗಾದಿ ಹಿನ್ನೆಲೆ ಹಬ್ಬದ ಅಡುಗೆ ಮಾಡಲು ವಿದ್ಯುತ್ ಅವಶ್ಯಕತೆ ಇತ್ತು. ಹಠಾತ್ ವಿದ್ಯುತ್ ವ್ಯತ್ಯಯದಿಂದ ಹಬ್ಬ ಆಚರಣೆಗೆ ಸಮಸ್ಯೆ ಉಂಟಾಯಿತು ಎಂದು ಗೃಹಿಣಿಯರು ಬೇಸರ ಪಟ್ಟಿದ್ದರು. ಆದರೆ, ಸಿಬ್ಬಂದಿಗಳ ನಿರಂತರ ಪ್ರಯತ್ನದಿಂದ ತಾ. ೩ ರ ಮಧ್ಯರಾತ್ರಿ ೧೨.೦೦ ಗಂಟೆಗೆ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಮರು ಸ್ಥಾಪನೆಗೊಂಡಿತು.

ಹಾನಿಯಾದ ಡಬಲ್ ಸರ್ಕ್ಯೂಟ್

ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯಕ್ಕೆ ಡಬಲ್ ಸರ್ಕ್ಯೂಟ್ ಹಾನಿಯಾಗಿರುವುದು ಕೂಡ ಒಂದು ಕಾರಣವಾಗಿದೆ. ಕಡಿತಗೊಂಡ ವಿದ್ಯುತ್ ಸಂಪರ್ಕ ಕಲ್ಪಿಸಲು ಕನಿಷ್ಟ ೨೪ ಗಂಟೆ ಬೇಕಾಗಿತ್ತು. ಆದರೆ, ಮರುದಿನ ಯುಗಾದಿ ಹಬ್ಬ ಹಿನ್ನೆಲೆ ಮನೆಮನೆಗೆ ವಿದ್ಯುತ್ ಕಲ್ಪಿಸುವುದು ಕೂಡ ಇಲಾಖೆಯ ಆದ್ಯತೆಯಾಗಿತ್ತು. ಕೆ.ಪಿ.ಟಿ.ಸಿ.ಎಲ್. ಅಧಿಕಾರಿಗಳು ಕೈಕಟ್ಟಿ ಕೂರದೆ ಸಂಯಮದಿAದ ಕೆಲಸದಲ್ಲಿ ತೊಡಗಿಸಿಕೊಂಡರು. ಹತ್ತುಹಲವು ಯೋಜನೆ ರೂಪಿಸಿ, ಖುದ್ದು ಅಧಿಕಾರಿಗಳು ಮಧ್ಯರಾತ್ರಿ ಪರಿಶೀಲನೆ ನಡೆಸಿ ಕೊನೆಗೂ ವಿದ್ಯುತ್ ಕಲ್ಪಿಸಲಾಯಿತು.

ಬಸ್ತಿಪುರದಲ್ಲಿ ೨೨೦ ಕೆ.ವಿ.ಯ ಡಬಲ್ ಸರ್ಕ್ಯೂಟ್‌ಗಳಿವೆ. ಒಂದರಲ್ಲಿ ಹಾನಿ ಸಂಭವಿಸಿದರೆ ಮತ್ತೊಂದು ಲೈನ್ ಮೂಲಕ ವಿದ್ಯುತ್ ನೀಡುವ ವ್ಯವಸ್ಥೆ ಇದೆ. ಆದರೆ, ಟವರ್‌ನ ತುದಿಯ ಭಾಗ ತುಂಡಾಗಿ ಬಾಗಿದ ಪರಿಣಾಮ ಯಾವುದೇ ಲೈನ್‌ಗಳ ಮೂಲಕವೂ ವಿದ್ಯುತ್ ನೀಡುವುದು ಅಸಾಧ್ಯದ ಮಾತಾಗಿತ್ತ್ತು. ಬೇರೆ ಬೇರೆ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಪ್ರಯತ್ನ ಕೈಚೆಲ್ಲದ ಕೆ.ಪಿ.ಟಿ.ಸಿ.ಎಲ್. ಬಳಿಕ ತಾತ್ಕಾಲಿಕ ಲೈನ್ ಮೂಲಕ ವಿದ್ಯುತ್ ನೀಡಲು ಚಿಂತಿಸಿತು. ಈ ಪ್ರಯತ್ನ ಕೊನೆಗೆ ಫಲಪ್ರದಗೊಂಡು ಮಧ್ಯರಾತ್ರಿ ೧೨ ಗಂಟೆಗೆ ವಿದ್ಯುತ್ ಸಂಪರ್ಕ ದೊರೆಯುವಂತಾಯಿತು.

ಭಾರಿ ಗಾಳಿ ಸಹಿತ ಮಳೆಯಿಂದ ಟವರ್‌ನಲ್ಲಿ ಮಾತ್ರ ಸಮಸ್ಯೆ ಉಂಟಾಗಿತ್ತು. ಅದೃಷ್ಟವಶಾತ್ ವಿದ್ಯುತ್ ತಂತಿಗಳು ತುಂಡಾಗಿರಲಿಲ್ಲ. ಹಾಗಾಗಿ ಟವರ್ ಅನ್ನು ತಾತ್ಕಾಲಿಕವಾಗಿ ಸರಿಪಡಿಸಿ ವಿದ್ಯುತ್ ಸಂಪರ್ಕ ಒದಗಿಸಲಾಯಿತು. ಆಗಾಗೆ ವಿದ್ಯುತ್ ‘ಟ್ರಿಪ್’ ಕೂಡ ಆಗುತಿತ್ತು. ಇದನ್ನು ತಾಂತ್ರಿಕ ಪರಿಣಿತರು ತಾತ್ಕಾಲಿಕವಾಗಿ ಸರಿಪಡಿಸುವಲ್ಲಿ ಯಶಸ್ವಿಯಾದರು.

ಈ ಕೆಲಸಕ್ಕೆ ಬೃಹತ್ ಕಾಮಗಾರಿ ವಿಭಾಗ, ಟ್ರಾನ್ಸ್ಮಿಷನ್ ನಿರ್ವಾಹಕರು, ಲೈನ್‌ಮೆನ್‌ಗಳು ಸೇರಿದಂತೆ ಒಟ್ಟು ೫೦ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯದಲ್ಲಿ ತೊಡಗಿಸಿಕೊಂಡರು. ಮರುದಿನ ವಿದ್ಯುತ್ ಟವರ್ ಸರಿಪಡಿಸಿ ಟವರ್ ಹಾನಿಯಾಗಿದ್ದ ಭಾಗವನ್ನು ಹೊಸದಾಗಿ ಅಳವಡಿಸಲಾಯಿತು.

ಬಸ್ತಿಪುರ ಟು ಕೊಡಗು

ಬಸ್ತಿಪುರದಿಂದ ನೇರವಾಗಿ ಕುಶಾಲನಗರಕ್ಕೆ ೨೨೦ ಕೆ.ವಿ. ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಬಳಿಕ ಕುಶಾಲನಗರದಿಂದ ಪಿರಿಯಾಪಟ್ಟಣಕ್ಕೆ ನಂತರ ಅಲ್ಲಿಂದ ಗೋಣಿಕೊಪ್ಪ, ವೀರಾಜಪೇಟೆ ಪವರ್ ಸ್ಟೇಷನ್‌ಗೆ ವಿದ್ಯುತ್ ಪೂರೈಕೆಯಾಗುತ್ತದೆ. ಇಲ್ಲಿಂದ ವೀರಾಜಪೇಟೆ ತಾಲೂಕು ವ್ಯಾಪ್ತಿ ಹಾಗೂ ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಪೂರೈಕೆಯಾಗುತ್ತದೆ.

ಮತ್ತೊಂದು ಸಂಪರ್ಕ ಕುಶಾಲನಗರದಿಂದ ಸುಂಟಿಕೊಪ್ಪ ಹಾಗೂ ಮಡಿಕೇರಿ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಬಸ್ತಿಪುರದಲ್ಲಿ ಎದುರಾದ ತಾಂತ್ರಿಕ ಸಮಸ್ಯೆ ಜಿಲ್ಲೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಜೊತೆಗೆ ಪಿರಿಯಾಪಟ್ಟಣ ತಾಲೂಕು ಹಾಗೂ ಕೆ.ಆರ್.ನಗರದ ೫ ಸ್ಟೇಷನ್, ಬಿಳಿಕೆರೆ ವ್ಯಾಪ್ತಿಯಲ್ಲಿಯೂ ವಿದ್ಯುತ್ ಅಡಚಣೆ ಉಂಟಾಯಿತು.

-ಹೆಚ್.ಜೆ. ರಾಕೇಶ್