*ಗೋಣಿಕೊಪ್ಪ, ಏ. ೪: ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮಳೆಗಾಗಿ ಪರ್ಜನ್ಯ ಪೂಜೆಯನ್ನು ನಡೆಸಲಾಯಿತು.
ತಂತ್ರ್ರಿಗಳು, ಅರ್ಚಕರ ನೇತೃತ್ವದಲ್ಲಿ ಮಳೆಗಾಗಿ ವಿಶೇಷವಾಗಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರೀ ಉಮಾಮಹೇಶ್ವರಿ ದೇವಿಗೆ ವಿವಿಧ ಅಭಿಷೇಕ ಮಾಡಲಾಯಿತು.
ಮಳೆಗಾಗಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಾರ್ಥಿಸಿ ನಾಡಿನ ಸುಬೀಕ್ಷೆಗಾಗಿ ಮಹಾಗಣಪತಿ, ಈಶ್ವರ, ಸುಬ್ರಮಣಿ ಹಾಗೂ ಉಮಾಮಹೇಶ್ವರಿ ದೇವರುಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥಿಸಿದರು.
ಈ ಸಂದರ್ಭ ಉಮಾಮಹೇಶ್ವರಿ ದೇವಿಗೆ ಕುಂಕುಮಾರ್ಚನೆ, ಎಳನೀರು ಅಭಿಷೇಕ, ಅರಿಶಿನ ಅಭಿಷೇಕ, ಪಂಚಾಮೃತ ಅಭಿಷೇಕ ಸೇವೆಗಳು ನಡೆದವು. ಮಳೆಗಾಗಿ ನೂರಾರು ಭಕ್ತಾದಿಗಳು ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮನೆಯಪಂಡ ಮೇಜರ್ ಬೋಪಣ್ಣ, ಹಾಗೂ ಜಪ್ಪೆಕೋಡಿ ರಾಜ ಉತ್ತಪ್ಪ, ಕೊಪ್ಪಿರ ಸನ್ನಿಸೋಮಯ್ಯ, ಪೊನ್ನಿಮಾಡ ಭೋಜಪ್ಪ, ಪ್ರಮೋದ್ ಗಣಪತಿ, ಶೋಭಿತ್ ಪಿವಿ, ಕಾಡ್ಯಮಾಡ ಚೇತನ್, ಸುರೇಶ್, ಪ್ರಧಾನ ಅರ್ಚಕ ಸೀತಾರಾಮ, ವ್ಯವಸ್ಥಾಪಕ ಮಧು ಇದ್ದರು.