ವೀರಾಜಪೇಟೆ, ಏ. ೩: ವೀರಾಜಪೇಟೆ ಪಟ್ಟಣ ಪಂಚಾಯಿತಿ ಯು ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ೧೨೦ ರೂಗಳಿದ್ದ ನೀರಿನ ದರವನ್ನು ಏಕಾಏಕಿ ೧೩೦ ರೂಪಾಯಿಗೆ ಏರಿಕೆ ಮಾಡಿತ್ತು. ಇದನ್ನು ಖಂಡಿಸುವುದಾಗಿ ವೀರಾಜಪೇಟೆ ನಗರ ಕಾಂಗ್ರೆಸ್ ಸಮಿತಿ ಹೇಳಿದೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ.ಪಂ. ಹಿರಿಯ ಸದಸ್ಯ ಸಿ.ಕೆ. ಪೃಥ್ವಿನಾಥ್, ವೀರಾಜಪೇಟೆಯಲ್ಲಿ ೨೩ ಸಾವಿರ ಜನಸಂಖ್ಯೆಯಿದ್ದು, ಇತ್ತೀಚೆಗೆ ಪಟ್ಟಣ ಪಂಚಾಯಿತಿ ೧೨೦ ರೂಪಾಯಿಯಿದ್ದ ನೀರಿನ ದರವನ್ನು ಏಕಾಏಕಿ ಹತ್ತು ರೂಪಾಯಿ ಹೆಚ್ಚು ಮಾಡಿದೆ.
ಅಲ್ಲದೆ ಉದ್ಯಮಿಗಳಿಗೆ ಪರವಾನಗಿ ತೆರಿಗೆ, ಸ್ವಯಂಘೋಷಿತ ಆಸ್ತಿಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದೆ. ಕಳೆದೆರಡು ವರ್ಷಗಳಿಂದ ಜನತೆ ಕೊರೊನಾ ಹಾಗೂ ಲಾಕ್ಡೌನ್ನಿಂದ ತತ್ತರಿಸಿ ಹೋಗಿದ್ದಾರೆ. ಕಾವೇರಿ ನದಿ ಹುಟ್ಟುವ ಈ ನಾಡಿನಲ್ಲಿ ಜನರಿಗೆ ನಾವು ಉಚಿತವಾಗಿ ನೀರನ್ನು ನೀಡಬೇಕು. ಮಡಿಕೇರಿ ನಗರಸಭೆಯಲ್ಲಿ ನೀರಿನ ಮೇಲಿನ ದರ ನೂರು ರೂಪಾಯಿ ಇದೆ. ಹಾಗೆಯೇ ಸೋಮವಾರಪೇಟೆ ಯಲ್ಲಿಯೂ ನೂರು ರೂಪಾಯಿ ಇದೆ. ಆದರೆ ವೀರಾಜಪೇಟೆಯಲ್ಲಿ ಮಾತ್ರ ದರ ಏರಿಕೆ ಬೇಕಾಬಿಟ್ಟಿ ಮಾಡಲಾಗಿದೆ. ಜನರಿಗೆ ನೀರನ್ನು ದುಡ್ಡಿಗೆ ಮಾರಿ, ಪಟ್ಟಣ ಪಂಚಾಯಿತಿ ಆದಾಯ ಮಾಡಿಕೊಳ್ಳುವುದು ಬೇಡ ಎಂದರು.
ಕಾAಗ್ರೆಸ್ ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡುತ್ತಾ, ಕಾವೇರಿ ನಾಡಿನಲ್ಲಿ ನೀರಿಗೆ ಈ ರೀತಿ ದುಬಾರಿ ಬೆಲೆ ಮಾಡುವುದು ನಿಜಕ್ಕೂ ನಾಚಿಕೆ ಗೇಡಿನ ವಿಚಾರ. ಅಂಗಡಿಗಳಿಗೂ ತೆರಿಗೆ ಹೆಚ್ಚುಮಾಡಿ ವ್ಯಾಪಾರಿಗಳನ್ನು ಕಷ್ಟಕ್ಕೆ ತಳ್ಳಿರುವುದು ಸರಿಯಲ್ಲ ಎಂದರು.
ವೀರಾಜಪೇಟೆಯಲ್ಲಿ ಪ್ರವಾ ಸೋದ್ಯಮವನ್ನು ಅಭಿವೃದ್ಧಿಪಡಿಸಲು ಶಾಸಕರು ಯಾವ ಯೋಜನೆಗಳನ್ನು ಅವರು ಈ ತಾಲೂಕಿಗೆ ತಂದಿದ್ದಾರೆ? ಎಂದು ಪ್ರಶ್ನಿಸಿದ ಅವರು, ಚಿಕ್ಕಪೇಟೆಯ ಹತ್ತಿರ ಇರುವ ಛತ್ರಕೆರೆ ಕೆರೆ ಈಗ ಗಬ್ಬು ನಾರುತ್ತಿದೆ. ಅದನ್ನು ಎಷ್ಟು ಸುಂದರ ಮಾಡಬಹುದು, ವೀರಾಜಪೇಟೆಯಲ್ಲಿರುವ ಕೆರೆಗಳ ಅಭಿವೃದ್ಧಿಯ ಬಗ್ಗೆಗೆ ಯಾರು ಚಿಂತಿಸುತ್ತಿಲ್ಲ. ವೀರಾಜಪೇಟೆಯನ್ನು ಸಮಗ್ರ ಅಭಿವೃದ್ಧಿ ಮಾಡಿ ಪ್ರವಾಸಿಗರು ಇಲ್ಲಿಗೆ ಬರುವಂತೆ ಮಾಡಬೇಕು. ಇರುವ ಒಂದು ತಾಲೂಕು ಮೈದಾನವನ್ನು ಪಾರ್ಕಿಂಗ್ ಜಾಗವಾಗಿ ಬಳಸಲಾಗುತ್ತಿದೆ. ಇಲ್ಲಿ ಮಕ್ಕಳಿಗೆ ಆಟವಾಡಲು ಸರಿಯಾದ ಕ್ರೀಡಾಂಗಣದ ವ್ಯವಸ್ಥೆಯಿಲ್ಲ. ನೆರೆಯ ಕೇರಳ ರಾಜ್ಯದಲ್ಲಿ ಮಕ್ಕಳಿಗೆ ಎಲ್ಲಾ ಕ್ರೀಡೆಗಳನ್ನು ಆಡಲು ವ್ಯವಸ್ಥಿತ ಕ್ರೀಡಾಂಗಣಗಳಿವೆ.
ಪಟ್ಟಣ ಪಂಚಾಯಿತಿ ಈ ಬಾರಿಯ ಬಜೆಟ್ನಲ್ಲಿ ನಗರದ ಜನತೆಗೆ ಯಾವ ಹೊಸ ಯೋಜನೆ ಗಳನ್ನು ಘೋಷಣೆ ಮಾಡಿದೆ ಎಂದು ತಿಳಿಸಬೇಕಿದೆ. ವೀರಾಜಪೇಟೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಪರಿಣಿತಿಯಿರುವ ಅನೇಕ ಪ್ರಜ್ಞಾವಂತರಿದ್ದಾರೆ ಅವರ ಸಲಹೆ ಪಡೆದು ವೀರಾಜಪೇಟೆ ನಗರವನ್ನು ಇನ್ನಾದರೂ ಸುಂದರಗೊಳಿಸಿ ಎಂದು ಪಟ್ಟಣ ಪಂಚಾಯಿತಿಗೆ ಪರೋಕ್ಷವಾಗಿ ತಿಳಿಸಿದರು.
ಇನ್ನೂ ಹತ್ತು ದಿನಗಳ ಗಡುವನ್ನು ಪಟ್ಟಣ ಪಂಚಾಯಿತಿಗೆ ನೀಡುತ್ತಿದ್ದೇವೆ. ನೀರಿನ ದರ ಹಾಗೂ ಅಂಗಡಿ ಮೇಲಿನ ತೆರಿಗೆ, ಆಸ್ತಿ ತೆರಿಗೆ ಇಳಿಕೆ ಮಾಡದೇ ಹೋದಲ್ಲಿ ಪಟ್ಟಣ ಪಂಚಾಯಿತಿಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಶಾಹುಲ್ ಹಮೀದ್, ಪಟ್ಟಣ ಪಂಚಾಯಿತಿ ಸದಸ್ಯೆ ಫಸಿಹಾ ತಬಸುಮ್ ಹಾಜರಿದ್ದರು.