ಕುಶಾಲನಗರ, ಏ. ೧: ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿರುವ ಶ್ರಮಿಕರಾದ ಗಿರಿಜನ ವಾಸಿಗಳನ್ನು ತುಮಕೂರಿನ ಸಿದ್ಧಗಂಗಾ ಕ್ಷೇತ್ರ ದರ್ಶನಕ್ಕೆ ಕರೆದೊಯ್ಯಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕರೆದೊಯ್ಯಲಾಗುವುದು ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಹೇಳಿದರು.
ಕುಶಾಲನಗರ ತಾಲೂಕು ಸಿದ್ಧಗಂಗಾ ಶ್ರೀ ಭಕ್ತಮಂಡಳಿ ವತಿಯಿಂದ ಹಾರಂಗಿ ಸಮೀಪದ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿಯವರ ೧೧೫ ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ಧಗಂಗಾ ಮಠ ಇಡೀ ನಾಡಿಗೆ ಕಲಶಪ್ರಾಯವಾದುದು. ಅಲ್ಲಿನ ಶ್ರೀಗಳು ಸಮಾಜಕ್ಕೆ ದಾರಿ ದೀಪವಾಗಿದ್ದರು. ಅವರ ಆದರ್ಶ ಹಾಗೂ ಸರಳವಾದ ಜೀವನ ನಮಗೆಲ್ಲರಿಗೂ ಅನುಕರಣೀಯವಾಗಿರಬೇಕು ಎಂದರು. ಗಿರಿಜನ ಮಕ್ಕಳನ್ನು ಸಿದ್ದಗಂಗಾ ಮಠಕ್ಕೆ ಸೇರಿಸಿದರೆ ಉತ್ತಮ ವಿದ್ಯಾವಂತರು ಹಾಗೂ ಸಜ್ಜನರಾಗಿ ಹೊರಹೊಮ್ಮುತ್ತಾರೆ ಎಂದು ತಹಶೀಲ್ದಾರ್ ಪ್ರಕಾಶ್ ಕರೆ ನೀಡಿದರು.
ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮೆ.ನಾ.ವೆಂಕಟನಾಯಕ್ ಮಾತನಾಡಿ, ಜ್ಞಾನವಂತರು, ಶಿಕ್ಷಣವಂತರು ಹಾಗೂ ವಿದ್ಯಾವಂತರ ಸಮಾಜ ನಾಡು ಕಟ್ಟಲು ತ್ರಿವಿಧ ದಾಸೋಹದಂತಹ ಮಹತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಡಾ.ಶಿವಕುಮಾರ ಶ್ರೀಗಳು ಜೋಳಿಗೆ ಹಿಡಿದು ನಾಡನ್ನು ಸುತ್ತಿ ತಂದAತಹ ಧಾನ್ಯದಲ್ಲಿ ಮಠದಲ್ಲಿನ ಸಾವಿರಾರು ಮಕ್ಕಳಿಗೆ ನಿತ್ಯವೂ ಅನ್ನದಾನ ನಡೆಯುತ್ತಿದೆ. ರಾಜಕಾರಣಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಸಂಸ್ಕಾರ ಹಾಗೂ ಆಡಳಿತದ ನೀತಿ ಪಾಠ ಹೇಳುತ್ತಿದ್ದ ಶ್ರೀಗಳ ಬಳಿ ದೇಶ ಹಾಗೂ ರಾಜ್ಯದ ರಾಜಕಾರಣಿಗಳ ಸಮೂಹವೇ ಧಾವಿಸುತ್ತಿತ್ತು ಎಂದರು.
ಕುಶಾಲನಗರ ತಾಲೂಕು ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಶ್ರೀಗಳ ಆದರ್ಶ ಹಾಗೂ ತತ್ವಗಳನ್ನು ಸಮಾಜದ ಹಿಂದುಳಿದ ಮಂದಿಯ ಬಳಿ ಪ್ರಚುರಪಡಿಸುವ ನಿಟ್ಟಿನಲ್ಲಿ ಶ್ರೀಗಳ ಹುಟ್ಟು ಹಬ್ಬವನ್ನು ಗಿರಿಜನ ಹಾಡಿಯ ನಿವಾಸಿಗಳ ಸಮ್ಮುಖದಲ್ಲಿ ನಡೆಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಗಿರಿಜನ ವಾಸಿಗಳು ಹಾಗೂ ಮಕ್ಕಳನ್ನು ಸಿದ್ಧಗಂಗಾ ಕ್ಷೇತ್ರಕ್ಕೆ ಕರೆದೊಯ್ಯಲು ತಾಲೂಕು ಆಡಳಿತಕ್ಕೆ ಮನವಿ ಮಾಡಿದಾಗ, ಸ್ಥಳದಲ್ಲಿದ್ದ ತಹಶೀಲ್ದಾರ್ ಪ್ರಕಾಶ್, ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಸಿದ್ಧಗಂಗಾ ಪುಣ್ಯಕ್ಷೇತ್ರದ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಸಹಾಯಕ ಅಧಿಕಾರಿ ಅನಿಲ್, ಪ್ರಗತಿಪರ ಕೃಷಿಕ ಅತ್ತೂರಿನ ಜರ್ಮಿ ಡಿಸೋಜಾ, ರಾಮಕೃಷ್ಣ, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ, ನಂಜರಾಯಪಟ್ಟಣ ಶಾಲಾ ಶಿಕ್ಷಕ ಎಸ್.ನಾಗರಾಜು, ಹೆಬ್ಬಾಲೆ ಶಾಲೆಯ ಶಿಕ್ಷಕ ಲೋಕೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಮ್ಮ, ಪಂಚಾಯಿತಿ ಪಿಡಿಓ ಸಂತೋಷ್, ಪುರುಷೋತ್ತಮ, ಬೆಂಡೆಬೆಟ್ಟ ಹಾಡಿಯ ಅಧ್ಯಕ್ಷ ಹರೀಶ್, ತಮ್ಮಯ್ಯ, ರವಿ, ಕೀರ್ತನಾ, ಮಣಿ, ಶಾಂತಿ, ಮುತ್ತ, ಉದಯ, ಶಿವಮಣಿ ಮೊದಲಾದವರಿದ್ದರು.