ಕೂಡಿಗೆ, ಏ. ೧: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಳ್ಳಿ ಗ್ರಾಮದಲ್ಲಿ ಶ್ರೀ ಹನುಮಂತರಾಯ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಹನುಮಂತರಾಯಸ್ವಾಮಿ ನೂತನ ಮುಖ್ಯ ದ್ವಾರ ಉದ್ಘಾಟನೆ ಮತ್ತು ೧೩ ನೇ ವರ್ಷದ ಪೂಜಾ ಕಾರ್ಯಕ್ರಮ ಹಾಗೂ ಜಾತ್ರೆ ಮಹೋತ್ಸವ ಕಾರ್ಯಕ್ರಮವು ತಾ. ೨. ರಿಂದ ತಾ. ೪ ರವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ತಾ. ೪ ರಂದು ಮುಖ್ಯ ಹನುಮಂತರಾಯ ಸ್ವಾಮಿ ದ್ವಾರದ ಉದ್ಘಾಟನೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಮೋಹನರಾಜ್ ತಿಳಿಸಿದ್ದಾರೆ.
ತಾ. ೨ ರಿಂದ ಪೂಜಾ ಕಾರ್ಯಕ್ರಮಗಳು ಆರಂಭವಾಗಿ ತಾ. ೩ರಂದು ಗಂಗಾಪೂಜೆ, ಮುತೈದೆಯರಿಂದ ಕಳಸ ಹೊರುವ ಕಾರ್ಯಕ್ರಮ, ಪೂರ್ಣ ಕುಂಭ, ಮಂಗಳವಾದ್ಯ ವೈವಿಧ್ಯಮಯ ಮಹಾಸಂಕಲ್ಪ ಗುರುಗಣಪತಿ ಪೂಜೆ, ಗಣಪತಿ ಹೋಮ ಜರುಗಲಿದೆ.
ತಾ. ೪ ರಂದು ಶ್ರೀ ಹನುಮಂತರಾಯ ಸ್ವಾಮಿ ನೂತನ ಮುಖ್ಯ ದ್ವಾರದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೆರವೇರಿಸಲಿದ್ದಾರೆ, ಉತ್ಸವದ ಉದ್ಘಾಟನೆಯನ್ನು ಜೆಡಿಎಸ್ ಮುಖಂಡ ಎಂ.ಎನ್. ಮುತ್ತಪ್ಪ ನೆರವೇರಿಸಲಿದ್ದಾರೆ. ಕಳಸ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಜನಪ್ರತಿನಿಧಿಗಳು ಸಹಕಾರ ಸಂಘಗಳ ಅಧ್ಯಕ್ಷರು ಸೇರಿದಂತೆ ಗ್ರಾಮದ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಶ್ರೀ ಹನುಮಂತರಾಯ ಸ್ವಾಮಿ ದೇವಾಲಯ ಸಮಿತಿಯ ಕಾರ್ಯದರ್ಶಿ ಟಿ ಕೆ ವಸಂತ ತಿಳಿಸಿದ್ದಾರೆ.