ಸೋಮವಾರಪೇಟೆ,ಏ.೧: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠಾಧೀಶರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆ ಕಾರ್ಯಕ್ರಮ ಪಟ್ಟಣದ ದೇವಾಲಯ ರಸ್ತೆಯ ಮೂಕಾಂಬಿಕಾ ಕಟ್ಟಡದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಂದಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವನವನ್ನೇ ಮನುಕುಲದ ಒಳಿತಿಗೆ ಸವೆಸಿದರು. ತ್ರಿವಿಧ ದಾಸೋಹದ ಮೂಲಕ ಸಮಾಜಕ್ಕೆ ನೆರವಾದ ಸ್ವಾಮೀಜಿಗಳ ಸೇವಾ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್‌ನ ಜಯರಾಜ್, ಗಣಗೂರು ಚಂದ್ರಶೇಖರ್, ಎಸ್. ಚಂದ್ರು, ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.