ಮಡಿಕೇರಿ, ಏ.೧: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಆಯುಷ್ ಆಸ್ಪತ್ರೆ ಸಿಬ್ಬಂದಿ ಕೊರತೆಯ ನಡುವೆಯೂ ಹಲವು ಆರೋಗ್ಯ ಸೇವೆಗಳನ್ನು ಉತ್ತಮವಾಗಿ ನೀಡುತ್ತಾ ಮುನ್ನಡೆಯುತ್ತಿದೆ. ಪಂಚಕರ್ಮ ಚಿಕಿತ್ಸಾ ಪದ್ಧತಿಯಡಿ ಕಾರ್ಯನಿರ್ವಹಿಸುತ್ತಿರುವ ಈ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ರೀತಿಯ ಕಾಯಿಲೆಗಳಿಗೂ ಚಿಕಿತ್ಸೆ ಲಭ್ಯವಿದೆ.

ಪಂಚಕರ್ಮ ಚಿಕಿತ್ಸಾ ಪದ್ಧತಿಯಡಿ ವಮನ, ವಿರೇಚನ, ಬಸ್ತಿ, ನಶ್ಯ, ರಕ್ತಮೋಕ್ಷನ ಕ್ರಮಗಳನ್ನು ಅನುಸರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಮನ ಎಂದರೆ ವಾಂತಿ ಮಾಡಿಸುವ ಕ್ರಮವಾಗಿದ್ದು, ಇದನ್ನು ಅಸ್ತಮ, ಅಪಸ್ಮಾರ, ಸೋರಿಯಾಸಿಸ್ ಮುಂತಾದ ಚರ್ಮ ವ್ಯಾಧಿಗಳಲ್ಲಿ ಅನುಸರಿಸಲಾಗುತ್ತದೆ. ವಿರೇಚನ ಎಂದರೆ ಭೇದಿ ಮಾಡಿಸುವ ಕ್ರಮವಾಗಿದ್ದು, ಇದನ್ನು ಕುಷ್ಟ, ಚರ್ಮರೋಗ, ಜಾಂಡೀಸ್, ಅಸ್ತಮಾ ಮುಂತಾದ ಪಿತ್ಥ ಪ್ರಧಾನ ರೋಗಗಳಲ್ಲಿ ಬಳಸಲಾಗುತ್ತದೆ. ಬಸ್ತಿ ಎಂದರೆ ಔಷಧ ಸಿದ್ಧ ತೈಲ, ಕಷಾಯಗಳನ್ನು ಗುದದ್ವಾರದ ಮೂಲಕ ನೀಡುವ ಕ್ರಮವಾಗಿದ್ದು, ಇದನ್ನು ವಾತ ಸಂಬAಧಿ ಕಾಯಿಲೆ ಪಾರ್ಶ್ವವಾಯು, ಶಿರ ಸಂಬAಧಿತ ಹಾಗೂ ನರ ರೋಗಗಳಿಗೆ ಉಪಯೋಗಿಸಲಾಗುತ್ತದೆ. ನಶ್ಯ ಎಂದರೆ ಮೂಗಿಗೆ ಔಷಧಿ ಹಾಕುವ ಕ್ರಮವಾಗಿದ್ದು ಇದನ್ನು ಮೈಗ್ರೇನ್, ಮೂಗು ಕಟ್ಟುವುದು, ತಲೆ ನೋವು, ಶೀತ, ನೆಗಡಿ, ಹಣೆಯ ಒಳಭಾಗದಲ್ಲಿ ಕಫಕಟ್ಟಿ ಸೈನಸೈಟಿಸ್ ಸೋಂಕು ಉಂಟಾಗಿದ್ದರೆ ಅನುಸರಿಸಲಾಗುತ್ತದೆ. ರಕ್ತ ಮೋಕ್ಷಣ ಎಂದರೆ ರಕ್ತಸ್ರಾವ ಉಂಟಾಗುವAತೆ ಮಾಡುವ ವಿಧಾನವಾಗಿದ್ದು, ಇದನ್ನು ವಿಶೇಷವಾಗಿ ಚರ್ಮ ರೋಗಗಳಲ್ಲಿ, ವಿಷಪ್ರಯೋಗಗಳಲ್ಲಿ ರಕ್ತ ದುಷ್ಟಿಯಿಂದಾದ ರೋಗಗಳಲ್ಲಿ ಸರ್ಪ ಸುತ್ತು, ಕುರ ಇತ್ಯಾದಿಗಳಲ್ಲಿ ಅಶುದ್ಧ ರಕ್ತವನ್ನು ಹೊರ ಹಾಕಬೇಕಾದ ಅನಿವಾರ್ಯತೆ ಕಂಡು ಬಂದಾಗ ಪ್ರಯೋಗ ಮಾಡಲಾಗುತ್ತದೆ.

ಇವುಗಳಲ್ಲದೆ ಕಣ್ಣು, ಕಿವಿ, ಮೂಗು ಇತ್ಯಾದಿ ಕುತ್ತಿಗೆಯ ಮೇಲ್ಭಾಗದಲ್ಲಿ ತೊಂದರೆ ಇದ್ದರೆ, ಮೆದುಳು, ನರಮಂಡಲಕ್ಕೆ ಸಂಬAಧಿಸಿದ ರೋಗಗಳಿಗೆ ಶಿರೋಬಸ್ತಿ ಎಂಬ ಚಿಕಿತ್ಸಾ ಕ್ರಮವನ್ನು ಅನುಸರಿಸಲಾಗುತ್ತದೆ. ಈ ಕ್ರಮದಲ್ಲಿ ತಲೆಯ ಸುತ್ತ ನಾಲ್ಕು ಅಂಗುಲ ಎತ್ತರವಾಗಿ ಕಟ್ಟೆಯಂತೆ ಚರ್ಮದ ಪಟ್ಟಿ ಸುತ್ತಿ ಒಳಭಾಗದಲ್ಲಿ ರೋಗಾನುಸಾರ ಔಷಧ ದ್ರವ್ಯ ಸಿದ್ಧ ತೈಲ ಹಾಕಿ ಸ್ವಲ್ಪ ಸಮಯದ ನಂತರ ನಿಧಾನವಾಗಿ ತೈಲ ತೆಗೆಯಲಾಗುತ್ತದೆ. ಈ ಚಿಕಿತ್ಸೆ ನರರೋಗಗಳು, ಪಾರ್ಕಿನ್‌ಸನ್ ಕಾಯಿಲೆ, ಇಂದ್ರಿಯ ದೌರ್ಬಲ್ಯ, ನಿದ್ರೆ ಇಲ್ಲದಿರುವುದು ಇವುಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ರಕ್ತದ ಒತ್ತಡ, ಮಾನಸಿಕ ಒತ್ತಡಗಳಿಗೆ, ಮೆದುಳು, ನರಮಂಡಲ ದೌರ್ಬಲ್ಯತೆಗೆ ರೋಗಿಯನ್ನು ಮಂಚದ ಮೇಲೆ

(ಮೊದಲ ಪುಟದಿಂದ) ಮಲಗಿಸಿ ಹುಬ್ಬುಗಳ ನಡುವೆ, ಹಣೆಯ ಮೇಲೆ ಔಷಧಿ ಸಿದ್ಧ ತೈಲ ಕಷಾಯವನ್ನು ಮಜ್ಜಿಗೆಯ ಪಾತ್ರೆಯ ಮೂಲಕ ನಿಧಾನವಾಗಿ ಹರಿಸಲಾಗುತ್ತದೆ. ಒಂದು ವಾರಗಳ ಕಾಲ ಈ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸೊಂಟ, ಕುತ್ತಿಗೆ, ಬೆನ್ನು, ಕಾಲು ನೋವುಗಳಿಗೆ, ಮಧುಮೇಹ ಸೇರಿದಂತೆ ಬಹುತೇಕ ಎಲ್ಲಾ ತರದ ವ್ಯಾಧಿಗಳಿಗೂ ಇಲ್ಲಿ ತೈಲ, ಕಷಾಯ, ಪುಡಿ, ಮಾತ್ರೆಗಳ ಚಿಕಿತ್ಸೆ ಲಭ್ಯವಿದ್ದು, ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಬಹುತೇಕ ಎಲ್ಲಾ ಔಷಧಿಗಳು ಆಯುಷ್ ಆಸ್ಪತ್ರೆಯಲ್ಲಿಯೆ ಲಭ್ಯವಿದೆ. ಒಂದು ವೇಳೆ ಯಾವುದಾದರು ಔಷಧಿ ದಾಸ್ತಾನು ಇಲ್ಲದಿದ್ದಲ್ಲಿ ಮಾತ್ರ ಹೊರ ಭಾಗದಿಂದ ತರಬೇಕಾಗುತ್ತದೆ.

ಆಸ್ಪತ್ರೆಗೆ ಭದ್ರತೆ ಇಲ್ಲ!

ನಗರದ ಕ್ರಿಸ್ಟಲ್ ಕೋರ್ಟ್ ಸಮೀಪವಿರುವ ಆಯುಷ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ವ್ಯವಸ್ಥೆಗಳು ಇವೆಯಾದರೂ, ಸಿಬ್ಬಂದಿಗಳ ಕೊರತೆಯಿಂದ ಆಸ್ಪತ್ರೆಗೆ ಅಭದ್ರತೆ ಕಾಡುತ್ತಿದೆ. ವೈದ್ಯರ ಕೊರತೆ, ಸಿಬ್ಬಂದಿ ಕೊರತೆಯಿಂದಾಗಿ ಈ ಆಸ್ಪತ್ರೆಗೆ ಕಾವಲುಗಾರರ ನೇಮಕವೂ ಆಗಿಲ್ಲ. ಒಟ್ಟು ನಾಲ್ವರು ವೈದ್ಯರಿದ್ದು, ಈ ಪೈಕಿ ಇಬ್ಬರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೂಡ ಬೆರಳೆಣಿಕೆಯಷ್ಟು ಮಾತ್ರ ಇದ್ದು, ಈ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಹಗಲು ವೇಳೆಯಲ್ಲಿ ಮಾತ್ರ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ರಾತ್ರಿ ವೇಳೆ ಆಸ್ಪತ್ರೆ ಮುಚ್ಚಲ್ಪಡುತ್ತದೆ. ಆಸ್ಪತ್ರೆಯ ಒಂದೆಡೆ ಪ್ರವಾಹದಿಂದ ಹಾನಿಗೊಂಡಿದ್ದ ತಡೆಗೋಡೆ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಮತ್ತೊಂದೆಡೆ ಕಾವಲುಗಾರರು ಇಲ್ಲದ ಕಾರಣ ರಾತ್ರಿ ವೇಳೆ ಆಸ್ಪತ್ರೆ ಆವರಣದಲ್ಲಿ ಪುಂಡ ಪೋಕರಿಗಳು ಮೋಜಿ ಮಸ್ತಿ ಮಾಡಲು ಯಾವುದೇ ಅಡ್ಡಿ ಇಲ್ಲದಂತಾಗಿದೆ.

ಸAಬAಧಿಸಿದವರು ಗಮನ ಹರಿಸಲಿ

ಮಡಿಕೇರಿ ಆಯುಷ್ ಆಸ್ಪತ್ರೆಯಲ್ಲಿ ಪ್ರಸ್ತುತ ಪ್ರತಿದಿನ ೪೦ ರಿಂದ ೫೦ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ರಾತ್ರಿ ಕಾರ್ಯಚರಿಸದ ಕಾರಣ ಹಗಲು ವೇಳೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿ ಕಳುಹಿಸಲಾಗುತ್ತಿದೆೆ. ಈ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಗಳಿದ್ದರೂ ಕೂಡ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಇರುವಂತಹ ವೈದ್ಯರು ಹಾಗೂ ಸಿಬ್ಬಂದಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸಿ ಆಯುಷ್ ಆಸ್ಪತ್ರೆಯಿಂದ ರೋಗಿಗಳಿಗೆ ಮತ್ತಷ್ಟು ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡುವತ್ತ ಗಮನ ಹರಿಸಬೇಕಿದೆ.

-ಉಜ್ವಲ್ ರಂಜಿತ್