ಶ್ರೀಮಂಗಲ, ಏ. ೧: ಕೋವಿಡ್-೧೯ ಸೋಂಕು ನಿಯಂತ್ರಣ ಕಾರ್ಯಕ್ರಮ, ವ್ಯಾಕ್ಸಿನ್ ನೀಡುವಿಕೆ, ವೈದ್ಯಾಧಿಕಾರಿಗಳ ಅನುಪಸ್ಥಿತಿ ಯಲ್ಲಿಯೂ ರಜೆ ರಹಿತವಾಗಿ ಸೇವೆ ನಿಭಾಯಿಸಿದ ಬಿರುನಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಅಧಿಕಾರಿ ಬಿ.ಎ. ನಳಿನಿ ಅವರನ್ನು ಬಿರುನಾಣಿಯ ವಿ ಎಲೆವೆನ್ ಫ್ರೆಂಡ್ಸ್ ಕ್ಲಬ್‌ನಿಂದ ಗೌರವಿಸಲಾಯಿತು.
ಬಿರುನಾಣಿ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ ಅವರು, ಬಿರುನಾಣಿ ಕೇಂದ್ರದಲ್ಲಿ ದೀರ್ಘ ಕಾಲದಿಂದ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಡಾ. ದೇವರಾಜ್ ಅವರು ೪ ವರ್ಷಗಳ ಹಿಂದೆ ಮರಣಪಟ್ಟ ನಂತರ ಇಲ್ಲಿಗೆ ಖಾಯಂ ವೈದ್ಯರು ಇರಲಿಲ್ಲ. ಆದರೂ, ದೂರದ ಆಸ್ಪತ್ರೆಗೆ ಹೋಗಲು ಆಗದೇ ಜನಸಾಮಾನ್ಯರು ಶುಶ್ರೂಷಕಿ ಅಧಿಕಾರಿ ನಳಿನಿ ಅವರ ಮೇಲೆ ವಿಶ್ವಾಸವಿರಿಸಿ ಬಂದು ಅಗತ್ಯ ಚಿಕಿತ್ಸೆ ಪಡೆದುಕೊಂಡು ಗುಣ ಮುಖರಾಗಿದ್ದಾರೆ. ನಳಿನಿ ಅವರು ಸೇವಾ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸಿ ಆರೋಗ್ಯ ಸೇವೆ ನೀಡಿದ್ದಾರೆ ಎಂದರು.
ಆರೋಗ್ಯ ಕೇಂದ್ರದಲ್ಲಿ ಲ್ಯಾಂಡ್ ಲೈನ್ ದೂರವಾಣಿ ಮತ್ತು ಬಿ.ಎಸ್.ಎನ್.ಎಲ್. ವೈ.ಫೈ. ಇಂಟರ್‌ನೆಟ್ ಸಂಪರ್ಕವನ್ನು ತಮ್ಮ ಕ್ಲಬ್‌ನಿಂದ ಉಚಿತವಾಗಿ ಕಲ್ಪಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಇದಲ್ಲದೇ ಕೇಂದ್ರದಲ್ಲಿ ಖಾಯಂ ೨೪ ಗಂಟೆ ವೈದ್ಯರ ಲಬ್ಯತೆ, ಆಂಬುಲೆನ್ಸ್ ಸೇವೆಯೊಂದಿಗೆ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗುವುದಾದರೇ ಆ ಬಗ್ಗೆ ಆರೋಗ್ಯ ಇಲಾಖೆಯಿಂದ ಯೋಜನೆ ರೂಪಿಸಿದರೆ ಅನುದಾನವನ್ನು ಒದಗಿಸುವ ಭರವಸೆ ನೀಡಿದರು.
ಕೇಂದ್ರದ ವೈದ್ಯಾಧಿಕಾರಿ ಡಾ. ಮಹಾಲಕ್ಷಿö್ಮ ಮಾತನಾಡಿ, ಸರಕಾರದ ಆರೋಗ್ಯ ಯೋಜನೆಗಳನ್ನು ಗುರಿ ಮೀರಿ ಸಾಧನೆ ಮಾಡಿ ಸೇವೆ ಮಾಡುವಲ್ಲಿ ಶ್ರಮಪಟ್ಟಿರುವ ಶುಶ್ರೂಷಕಿ ಅಧಿಕಾರಿ ನಳಿನಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಳಿನಿ, ವ್ಯಾಕ್ಸಿನ್ ಕಾರ್ಯಕ್ರಮಕ್ಕೆ ತಮ್ಮ ಕೇಂದ್ರದ ವ್ಯಾಪ್ತಿಯ ಹೊರಗಿನಿಂದಲೂ ಜನರು ಬಂದು ವ್ಯಾಕ್ಸಿನ್ ಪಡೆದಿದ್ದಾರೆ. ಗುರಿ ಮೀರಿ ಇದುವರೆಗೆ ೧೮ ಸಾವಿರ ವ್ಯಾಕ್ಸಿನ್ ನೀಡಲಾಗಿದೆ. ತನ್ನ ಹುಟ್ಟೂರಿನ ಜನರ ಆರೋಗ್ಯ ಸೇವೆ ಮಾಡಿರುವ ತೃಪ್ತಿ ಇದೆ ಎಂದರು.
ಈ ಸಂದರ್ಭ ಕ್ಲಬ್‌ನ ಕಾರ್ಯದರ್ಶಿ ಕರ್ತಮಾಡ ನಂದ, ಸದಸ್ಯರಾದ ಚೇರಂಡ ಕಾರ್ಯಪ್ಪ, ಬೊಳ್ಳೇರ ಪೊನ್ನಪ್ಪ, ಕಾಳಿಮಾಡ ರಶಿಕ, ಕುಪ್ಪುಡೀರ ಮುತ್ತಪ್ಪ, ಕಳಕಂಡ ಪೂಣಚ್ಚ, ಕಾಳಿಮಾಡ ಅನು, ಅಣ್ಣಳಮಾಡ ಸುರೇಶ್, ಅಣ್ಣಳಮಾಡ ಚಿಣ್ಣಪ್ಪ, ಕಾಳಿಮಾಡ ಹಾಲಪ್ಪ, ಚೊಟ್ಟಂಗಡ ಕುಶಾಲಪ್ಪ, ನೆಲ್ಲೀರ ನಿರನ್ ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.