ಸಿದ್ದಾಪುರ, ಏ. ೧: ನೆಲ್ಲಿಹುದಿಕೇರಿ ನಲ್ವತ್ತೇಕರೆ ಗ್ರಾಮದ ನ್ಯೂ ಕೂರ್ಗ್ ಸ್ಟಾರ್ ಯುವಕ ಸಂಘವು ನೂತನವಾಗಿ ಪುನರ್ ನಿರ್ಮಿತ ಕಟ್ಟಡದೊಂದಿಗೆ ಪುನರಾರಂಭ ಗೊಂಡಿದ್ದು, ಗ್ರಾಮದ ಸೇವಾ ಚಟುವಟಿಕೆಗೆ ಮತ್ತೊಮ್ಮೆ ಸಿದ್ಧವಾಗಿ ನಿಂತಿದೆ. ಇದರ ಉದ್ಘಾಟನೆಯನ್ನು ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಪಿ.ಆರ್. ಭರತ್, ಕೂರ್ಗ್ ಸ್ಟಾರ್ ಯುವಕ ಸಂಘವು ನಲ್ವತ್ತೇಕರೆಯ ಹೊಳೆಕರೆ ಭಾಗದ ೪೫ ಮಂದಿ ಯುವಕರ ಸಂಘಟನೆಯಾಗಿದ್ದು, ಇದು ಆ ವ್ಯಾಪ್ತಿಯ ಜನರ ಸಂಕಷ್ಟಕ್ಕೆ ಭುಜ ಕೊಟ್ಟು ನಿಂತಿದೆ. ಕ್ರೀಡೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಗ್ರಾಮದಲ್ಲೇ ಹೆಸರುವಾಸಿಯಾದ ಸಂಘಟನೆಯಾಗಿದೆ. ಕಳೆದ ಬಾರಿಯ ಪ್ರವಾಹದಲ್ಲಿ ಸಂಘದ ಕಟ್ಟಡವು ಕುಸಿದ ಪರಿಣಾಮ ಯುವಕ ಸಂಘದ ಸದಸ್ಯರು ಸೇರಿ ರೂ. ೧.೩೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿರುವುದು ವಿಶೇಷ. ಪ್ರವಾಹದ ಸಂದರ್ಭದಲ್ಲಿ ಯುವಕ ಸಂಘವು ಈ ವ್ಯಾಪ್ತಿಯ ಜನರಿಗೆ ರಕ್ಷಣೆ ನೀಡಿ ಸಹಕರಿಸಿದ್ದಾರೆ ಎಂದರು.
ಕೂರ್ಗ್ ಸ್ಟಾರ್ ಯುವಕ ಸಂಘದ ಅಧ್ಯಕ್ಷ ಪ್ರಿಯಸ್, ಕೋಶಾಧಿಕಾರಿ ಮಂಜು, ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ, ಸದಸ್ಯರಾದ ಸುಜಾತ, ಸಫಿಯ, ಶಂಶೀರ್, ಯುವಕ ಸಂಘದ ಪದಾಧಿಕಾರಿಗಳಾದ ಶಶಿ, ರದೀಶ್, ಷಂಶುದ್ದೀನ್, ಸುಬೈರ್ ಹಾಜರಿದ್ದರು.