ಕಣಿವೆ, ಮಾ. ೩೧: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕದ ಸಭೆ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶÀ ಸದಾಶಿವ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಯುವ ಘಟಕಗಳ ರಚನೆ ಮತ್ತು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕೊಡಗು ಜಿಲ್ಲಾ ವೀರಶೈವ ಮಹಾ ಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಕೊಡ್ಲಿಪೇಟೆಯ ಮೋಕ್ಷಿತ್, ಸೋಮವಾರಪೇಟೆ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಕೆ.ಪಿ. ಆದರ್ಶ್, ಕುಶಾಲನಗರ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಗುಡ್ಡೆಹೊಸೂರಿನ ಬಿ.ಎಂ. ಪ್ರದೀಪ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಹೆಚ್.ಎಂ. ಮಧುಸೂದನ್ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮಹಾಸಭಾದ ವತಿಯಿಂದ ತಾ. ೨೩ ರಂದು ಹೆಬ್ಬಾಲೆಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ, ತಾ. ೨೬ ರಂದು ಕುಶಾಲನಗರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ಸಭೆ ತೀರ್ಮಾನಿಸಿತು.

ಈ ಸಂದರ್ಭ ಮಾತನಾಡಿದ ಸದಾಶಿವ ಸ್ವಾಮೀಜಿ, ಕೊಡಗಿನ ವೀರಶೈವ ಸಮುದಾಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇತ್ತೀಚಿನ ದಿನಗಳಲ್ಲಿ ಸಮುದಾಯ ಸಂಘಟನೆ ಚಟುವಟಿಕೆ ಹೆಚ್ಚುತ್ತಿದೆ. ಕೊಡಗಿನಲ್ಲಿ ಸಮುದಾಯ ಬಾಂಧವರು ಕಡಿಮೆ ಪ್ರಮಾಣದಲ್ಲಿದ್ದರೂ ಕೂಡ ಇಲ್ಲಿನ ಚಟುವಟಿಕೆಗಳು ರಾಜ್ಯಕ್ಕೆ ಮಾದರಿಯಾಗಿದೆ. ಕುಶಾಲನಗರದಲ್ಲಿ ದಾನಿಗಳು ಉದಾರವಾಗಿ ನೀಡಿರುವ ಕೋಟ್ಯಂತರ ಮೌಲ್ಯದ ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಯುವ ಸಮೂಹ ಕಾರ್ಯೋನ್ಮುಖವಾಗಬೇಕಿದೆ ಎಂದು ಕರೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ. ಶಿವಪ್ಪ ಮಾತನಾಡಿ, ಕ್ರೀಡಾಕೂಟ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಮುದಾಯ ಬಾಂಧವರೆಲ್ಲರೂ ತಪ್ಪದೆ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಈ ಸಂದರ್ಭ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಸಂದೀಪ್, ಉಪಾಧ್ಯಕ್ಷ ಎಸ್.ಎಸ್. ಸುರೇಶ್, ರಾಜ್ಯ ಯುವ ಘಟಕದ ನಿರ್ದೇಶಕ ಬಿ.ಎನ್. ವಿರೂಪಾಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ ಮತ್ತಿತರರು ಇದ್ದರು.