ಸೋಮವಾರಪೇಟೆ, ಮಾ. ೩೧: ೯೪ಸಿ ಮತ್ತು ೯೪ಸಿಸಿ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಮಾರ್ಚ್ ೩೧ ಕೊನೆ ದಿನವಾದ ಹಿನ್ನೆಲೆ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಾಗಿತ್ತು. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವ ಹಾಗೂ ಈವರೆಗೆ ಹಕ್ಕುಪತ್ರ ಪಡೆಯದೇ ಇರುವ ಮಂದಿ ಕೊನೆಯ ದಿನವಾದ ಇಂದು ತಾಲೂಕು ಕಚೇರಿಗೆ ಆಗಮಿಸಿ ಕೊನೆಕ್ಷಣದವರೆಗೂ ಅರ್ಜಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂದಿ ೯೪ಸಿ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಂದಿ ೯೪ಸಿಸಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಇದಕ್ಕೆ ಮಾರ್ಚ್ ೩೧ ಕೊನೆಯ ದಿನವೆಂದು ಈ ಹಿಂದೆಯೇ ತಿಳಿಸಲಾಗಿತ್ತು. ಆದರೂ ಈ ಬಗ್ಗೆ ಗಮನಹರಿಸದ ಮಂದಿ ಕೊನೆ ಕ್ಷಣದಲ್ಲಿ ಕಚೇರಿಗೆ ಆಗಮಿಸಿ ನೆಮ್ಮದಿ ಕೇಂದ್ರದ ಎದುರು ಗಂಟೆಗಟ್ಟಲೆ ಕಾದು ಅರ್ಜಿ ಸಲ್ಲಿಸಿದರು.

ಸರ್ಕಾರಿ ಪೈಸಾರಿ ಮತ್ತು ಊರುಗುಪ್ಪೆ ಜಾಗದಲ್ಲಿ ಕಳೆದ ಅನೇಕ ದಶಕಗಳಿಂದ ಮನೆಗಳನ್ನು ಕಟ್ಟಿಕೊಂಡು ಸೂಕ್ತ ದಾಖಲೆಗಳಿಲ್ಲದೇ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದ ಮಂದಿಗೆ ಸರ್ಕಾರದ ಕಂದಾಯ ಇಲಾಖೆ ಮೂಲಕ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೆ ೧೮೦೦ಕ್ಕೂ ಅಧಿಕ ಮಂದಿಗೆ ಹಕ್ಕು ಪತ್ರ ವಿತರಿಸಲಾಗಿದೆ.

ಸರ್ಕಾರವು ಕಂದಾಯ ಇಲಾಖೆ ಮೂಲಕ ೨೦೧೩-೧೪ರಲ್ಲಿ ಹಕ್ಕುಪತ್ರ ವಿತರಣೆಗೆ ಆದೇಶ ಹೊರಡಿಸಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ ೨೫.೦೨.೨೦೧೬ರಿಂದ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡಿರುವ ಮಂದಿಗೆ ಹಕ್ಕುಪತ್ರ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ೯೪ ಸಿಸಿ ನಮೂನೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೯೪ಸಿ ನಮೂನೆಯಡಿ ಅರ್ಜಿ ಆಹ್ವಾನಿಸಿದ್ದು, ಈವೆರೆಗೆ ಅರ್ಜಿ ಸಲ್ಲಿಸದ ಮಂದಿ ತಕ್ಷಣ ಅರ್ಜಿ ಸಲ್ಲಿಸಿ ಎಂದು ಸ್ವತಃ ಶಾಸಕ ರಂಜನ್, ತಹಶೀಲ್ದಾರ್ ಗೋವಿಂದರಾಜು ಅವರು ಪ್ರತಿ ಸಭೆಯಲ್ಲೂ ಮನವಿ ಮಾಡುತ್ತಿದ್ದರು.

ಆದರೆ ಸಮಯಾವಕಾಶವಿದ್ದರೂ ಅರ್ಜಿ ಸಲ್ಲಿಸದ ನೂರಾರು ಮಂದಿ ಕೊನೆ ದಿನದಂದು ದಾಖಲೆಗಳನ್ನು ಒಟ್ಟುಗೂಡಿಸಿ ನೆಮ್ಮದಿ ಕೇಂದ್ರದಲ್ಲಿ ಗಂಟೆಗಟ್ಟಲೆ ಕಾದು ಅರ್ಜಿ ಸಲ್ಲಿಸಿದರು.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕಳೆದ ೨೦೧೬ರಿಂದಲೇ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದರೂ ಈಗಿನ ತಹಶೀಲ್ದಾರ್ ಆರ್. ಗೋವಿಂದರಾಜು ಅವರು ಅಧಿಕಾರ ವಹಿಸಿಕೊಂಡ ನಂತರ ಈ ಬಗೆಗಿನ ಪ್ರಕ್ರಿಯೆಗೆ ವೇಗ ನೀಡಿದ್ದರ ಪರಿಣಾಮ, ದಾಖಲೆ ಪ್ರಮಾಣದಲ್ಲಿ ಹಕ್ಕುಪತ್ರ ವಿತರಿಸಲು ಸಾಧ್ಯವಾಗಿದೆ. ೨೦೧೬ರಿಂದ ೨೦೧೮ರವರೆಗೆ ೪೫೧ ಮಂದಿಗೆ ಮಾತ್ರ ಹಕ್ಕು ಪತ್ರ ಲಭಿಸಿತ್ತು. ೨೦೧೯ರ ಆರಂಭದಲ್ಲಿ ತಾಲೂಕಿನ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಗೋವಿಂದರಾಜು ಅವರು ತಮ್ಮ ಅವಧಿಯಲ್ಲಿ ೧೮೦೦ಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಂಡಿದ್ದಾರೆ. ಕಂದಾಯ ಇಲಾಖೆಯ ಕಾರ್ಯಗಳಿಗೆ ವೇಗ ನೀಡಿದ್ದರ ಪರಿಣಾಮ ಕಡಿಮೆ ಅವಧಿಯಲ್ಲಿ ಹೆಚ್ಚು ಹಕ್ಕುಪತ್ರಗಳನ್ನು ವಿತರಿಸಲು ಸಾಧ್ಯವಾಗಿದೆ.

ಕೊನೆಯ ದಿನದಲ್ಲೂ ನೂರಾರು ಮಂದಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಸರ್ಕಾರದ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಅಭಿಪ್ರಾಯಿಸಿದ್ದಾರೆ.