ಸುಂಟಿಕೊಪ್ಪ, ಮಾ. ೩೦: ಮಾದಾಪುರ ಮಾರುಕಟ್ಟೆ ರಸ್ತೆಯ ಕಾಮಗಾರಿಯನ್ನು ರೂ. ೧೫ ಲಕ್ಷ ಅನುದಾನದಲ್ಲಿ ನಡೆಸಲಾಗಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಮಾದಾಪುರ ಮಾರುಕಟ್ಟೆ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಒಳಚರಂಡಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಲಾಗಿದೆ. ಪಂಚಾಯಿತಿ ವತಿಯಿಂದ ವರ್ತಕರ ಸಹಕಾರದಿಂದ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ತೊರೆನೂರು ಗ್ರಾಮದ ರಸ್ತೆಗೆ ರೂ. ೨ ಕೋಟಿ ಬಿಡುಗಡೆಯಾಗಿದ್ದು ಕೊಡಗರಹಳ್ಳಿ, ಕಂಬಿಬಾಣೆ, ೭ನೇ ಹೊಸಕೋಟೆ ಚಿಕ್ಲಿಹೊಳೆ ರಸ್ತೆಗೆ ರೂ. ೨ ಕೋಟಿ ೧೫ ಲಕ್ಷ ಬಿಡುಗಡೆಯಾಗಿದ್ದು, ಇದರ ಭೂಮಿಪೂಜೆ ಭಾನುವಾರ ನೆರವೇರಿಸಲಾಗುವದೆಂದು ಹೇಳಿದರು.

ಕೊಡಗಿನ ಬೆಳೆಗಾರರಿಗೆ ಬಿಜೆಪಿ ಸರಕಾರ ೧೦ ಹೆಚ್‌ಪಿ ಒಳಗಿನ ಪಂಪ್‌ಸೆಟ್‌ನಲ್ಲಿ ತೋಟಕ್ಕೆ ಹಾಯಿಸಲು ಉಚಿತ ವಿದ್ಯುತ್ ಕಲ್ಪಿಸಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲ್ಲೇ ಬಜೆಟ್‌ನಲ್ಲಿ ತಾನು ಹಾಗೂ ಕೆ.ಜಿ.ಬೋಪಯ್ಯ ಒತ್ತಾಯಿಸಿದ ಮೇರೆಗೆ ಸೇರಿಸಲಾಗಿದ್ದರೂ ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಅನುಷ್ಠಾನವಾಗಿರಲಿಲ್ಲ. ತಂಬಾಕು, ಕಬ್ಬು, ಅಡಿಕೆ ಬೆಳೆಗೆ ಉಚಿತ ವಿದ್ಯುತ್ ನೀಡುವ ಸರಕಾರ ಕಾಫಿ ಬೆಳೆಗಾರರಿಗೆ ಏಕೆ ನೀಡಲಿಲ್ಲ ಎಂದು ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದ ಮೇರೆಗೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಬೋಪಯ್ಯ ಇವರುಗಳು ಧ್ವನಿಗೂಡಿಸಿದ್ದರು ಮುಖ್ಯ ಮಂತ್ರಿಗಳು ಬೆಳೆಗಾರರಿಗೆ ಉಚಿತವಾಗಿ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಬಜೆಟ್ ಭಾಷಣದಲ್ಲಿ ಅಸ್ತು ನೀಡಿದ್ದಾರೆ ಎಂದೂ ಅವರು ಹೇಳಿದರು. ರಸ್ತೆ ಉದ್ಘಾಟನಾ ಸಮಾರಂಭದಲ್ಲಿ ಮಾದಾಪುರ ಗ್ರಾ.ಪಂ.ಅಧ್ಯಕ್ಷೆ ನಿರೂಪ, ಉಪಾಧ್ಯಕ್ಷೆ ಗೋಪಿ, ಸದಸ್ಯರುಗಳಾದ ಕೆ.ಎ.ಲತೀಫ್, ಪಿ.ಡಿ.ಅಂತೋಣಿ, ಸೋಮಣ್ಣ, ಸುರೇಶಭಾವೆ, ಕೆ.ಸಿ.ಶೀಲಾ, ಗಿರೀಶ, ಮಾಳೆಯಂಡ ದಮಯಂತಿ, ಮನುಬಿದ್ದಪ್ಪ, ಜ್ಯೋತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಸಿ.ಪೂರ್ಣಕುಮಾರ್, ಮಾಜಿ ಜಿ.ಪಂ. ಟಿ.ಪಿ.ಸಂದೇಶ, ಮಾದಾಪುರ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ನಾಪಂಡ ಉಮೇಶ, ಬಿಜೆಪಿ ಮುಖಂಡ ಕೊಪ್ಪತ್ತಂಡ ಗಣೇಶ, ನಿವೃತ್ತ ಶಿಕ್ಷಕಿ ಸರೋಜ, ಜಿ.ಪಂ. ಅಭಿಯಂತರರಾದ ವಿರೇಂದ್ರಕುಮಾರ್, ಮಾದಾಪುರ ಪೊಲೀಸ್ ಠಾಣೆಯ ಎಎಸ್‌ಐ ಪೊನ್ನಪ್ಪ ಉಪಸ್ಥಿತರಿದ್ದರು.