ಮಡಿಕೇರಿ, ಮಾ. ೨೯: ನೆಹರು ಯುವ ಕೇಂದ್ರ ಮಡಿಕೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಪೆರಾತ ಫ್ರೆಂಡ್ಸ್ ಯುವಕ ಸಂಘ ಬಿಳಿಗೇರಿ, ರ‍್ವತೋಕ್ಲು, ಕುಂಬಳದಾಳು ಇವರ ಸಹಯೋಗದಲ್ಲಿ ಏ. ೧೪ ರಂದು ಬಿಳಿಗೇರಿಯ ಪೆರಾತ ಫ್ರೆಂಡ್ಸ್ ಸಂಘದ ಮೈದಾನದಲ್ಲಿ ಜಿಲ್ಲಾಮಟ್ಟದ ಪುರುಷರ ಮುಕ್ತ ಬಾಲಿಬಾಲ್, ಮಹಿಳೆಯರಿಗೆ ಮುಕ್ತ ಹಗ್ಗಜಗ್ಗಾಟ ಹಾಗೂ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಪೆರಾತ ಫ್ರೆಂಡ್ಸ್ ಯುವಕ ಸಂಘದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೯ ಗಂಟೆಗೆ ಪಂದ್ಯಾಟವನ್ನು ಬೆಟ್ಟಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಸೈನಿಕ ತುಂತಜೀರ ಉಲ್ಲಾಸ ವಹಿಸಲಿದ್ದಾರೆ. ಅತಿಥಿಯಾಗಿ ಮೇಕೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪೂಜಾರಿರ ರಕ್ಷಿತ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಾಳಾಡಿ ದಿಲೀಪ್‌ಕುಮಾರ್ ವಹಿಸಲಿದ್ದು, ಅತಿಥಿಗಳಾಗಿ ಬೆಟ್ಟಗೇರಿ ಗ್ರಾ.ಪಂ. ಅಧ್ಯಕ್ಷ ರ‍್ಯಾಲಿ ಮಾದಯ್ಯ, ಡಾ. ಮೇಜರ್ ಕುಶ್ವಂತ್ ಕೋಳಿಬೈಲು ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ವಾಲಿಬಾಲ್ ವಿಜೇತ ತಂಡಕ್ಕೆ ರೂ. ೨೦ ಸಾವಿರ ನಗದು, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೧೫ ಸಾವಿರ ನಗದು, ಸೆಮಿಫೈನಲ್‌ಗೆ ಬರುವ ಎರಡು ತಂಡಗಳಿಗೆ ತಲಾ ೩೫೦೦ ರೂ. ನಗದು ನೀಡಲಾಗುತ್ತದೆ. ಮಹಿಳೆಯ ಹಗ್ಗಜಗ್ಗಾಟದ ವಿಜೇತರಿಗೆ ೭ ಸಾವಿರ ರೂ ನಗದು, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೫ ಸಾವಿರ ನಗದು ನೀಡಲಾಗುತ್ತದೆ. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಏ. ೧೨ ರ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೮೦೯೫೫೧೮೭, ೯೪೮೩೭೮೦೬೩೪ ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಾಳಾಡಿ ಕಿರಣ್, ಬಾಳಾಡಿ ಪ್ರತಾಪ್, ತುಂತಜೆ ಸತೀಶ್, ಕಡ್ಯದ ಭರತ್, ಬೊಬ್ಬಿರ ಲವ ಉಪಸ್ಥಿತರಿದ್ದರು.