(ಚಿತ್ರ - ವರದಿ : ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಮಾ. ೨೮: ತನ್ನ ದೈನಂದಿನ ಕಾಯಕಕ್ಕೆ ತೆರಳಿದ್ದ ವೇಳೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿಯು ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬಿ. ಶೆಟ್ಟಿಗೇರಿ ಸಮೀಪದ ಕೊಂಗಣ ಬಳಿ ನಡೆದಿದೆ. ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪಿದ ವ್ಯಕ್ತಿ ಕೂಲಿ ಕಾರ್ಮಿಕ ಗಣೇಶ್ ಆಲಿಯಾಸ್ ಪುಟ್ಟು (೨೮) ಎಂದು ಗುರುತಿಸಲಾಗಿದೆ. ಹುಲಿ ದಾಳಿಯಿಂದ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದು ತಕ್ಷಣ ಹುಲಿಯನ್ನು ಕೊಲ್ಲುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸದೇ ಮೃತದೇಹವನ್ನು ಸ್ಥಳದಿಂದ ಕದಲಲು ಬಿಡುವುದಿಲ್ಲ ವೆಂದು ಪಟ್ಟು ಹಿಡಿದ ಪ್ರಸಂಗ ಕೂಡ ಎದುರಾಯಿತು.
ಘಟನೆ ಹಿನ್ನೆಲೆ: ಕೂಲಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಗಣೇಶ್ ಎಂಬ ಕಾರ್ಮಿಕ ಎಂದಿನAತೆ ಸೋಮವಾರ ತನ್ನ ಸ್ನೇಹಿತರೊಂದಿಗೆ ತನ್ನ ಲೈನ್ ಮನೆಯಾದ ಗೋಣಿಕೊಪ್ಪ ಸಮೀಪದ ಗದ್ದೆಮನೆಯಿಂದ ಬಿಟ್ಟಂಗಾಲ ಸಮೀಪದ ರುದ್ರ ಗುಪ್ಪೆ ಬಳಿ ಇರುವ ಕಾಫಿ ಬೆಳೆಗಾರ ಅಯ್ಯಪ್ಪ ಎಂಬವರ ಕಾಫಿ ತೋಟಕ್ಕೆ ಕರಿಮೆಣಸು ಕುಯ್ಯುವ ಸಲುವಾಗಿ ತೆರಳಿದ್ದ.
ಮಧ್ಯಾಹ್ನ ವೇಳೆ ಒಟ್ಟಾಗಿ ಊಟ ಮುಗಿಸಿದ ಸ್ನೇಹಿತರು ಮತ್ತೆ ಕೆಲಸ ಆರಂಭಿಸಿದ್ದರು. ಸುಮಾರು ನಾಲ್ಕು ಗಂಟೆಯ ವೇಳೆ ಗಣೇಶ್ ಮೆಣಸು ಕುಯ್ಯುವ ಸಲುವಾಗಿ ಏಣಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ತೋಟದಲ್ಲಿದ್ದ ಹುಲಿಯು ದಿಢೀರನೆ ಈತನ ಮೇಲೆರಗಿ ಕುತ್ತಿಗೆ ಭಾಗವನ್ನು ಹಿಡಿದು ಸ್ಥಳದಲ್ಲಿಯೇ ರಕ್ತ ಹೀರಿದೆ.
ಈತನ ಹಿಂದೆ ಆಗಮಿಸಿದ ಸ್ನೇಹಿತ ಭರತ ಎಂಬ ಯುವಕ ಅನತಿ ದೂರದಿಂದ ಹುಲಿಯನ್ನು ಕಂಡು ಗಾಭರಿಗೊಂಡು ಪ್ರಾಣ ರಕ್ಷಣೆಗಾಗಿ ಅಲ್ಲಿದ್ದ ಮರವನ್ನು ಏರಿದ್ದಾನೆ.
ಗಣೇಶ್‌ನನ್ನು ಕೊಂದ ಹುಲಿಯು ನಂತರ ಅಲ್ಲಿಂದ ಮರೆಯಾಗಿದೆ. ಕೂಡಲೇ ಅಲ್ಲಿದ್ದ ಇತರ ಸ್ನೇಹಿತರಿಗೆ ಭರತ ಸುದ್ದಿ ಮುಟ್ಟಿಸಿದ್ದಾನೆ.
(ಮೊದಲ ಪುಟದಿಂದ) ಮಾಹಿತಿ ತಿಳಿದ ರೈತ ಸಂಘದ ಮುಖಂಡ ಕೊಲ್ಲಿರ ಬೋಪಣ್ಣ ಬಿ.ಶೆಟ್ಟಿಗೇರಿ ಭಾಗದ ಮುಖಂಡ ಚೇರಂಡ ಜಗನ್, ಹೊಸೂರು ಗ್ರಾ.ಪಂ. ಉಪಾಧ್ಯಕ್ಷ ಕೊಲ್ಲೀರ ಧನು, ಸದಸ್ಯರಾದ ಮಹದೇವ್, ಪ್ರಕಾಶ್ ಮತ್ತಿತರರು ಸ್ಥಳಕ್ಕೆ ತೆರಳಿದರು.
ಈ ವೇಳೆ ಘಟನೆ ನಡೆದ ಸ್ಥಳದಿಂದ ಮೃತದೇಹವನ್ನು ತಂದು ಆಸ್ಪತ್ರೆಗೆ ಸಾಗಿಸಲು ಆ್ಯಂಬ್ಯುಲೆನ್ಸ್ ನಲ್ಲಿ ಇರಿಸಿದ್ದರು, ಇದನ್ನು ಖಂಡಿಸಿದ ಗ್ರಾಮಸ್ಥರು ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸದ ಹೊರತು ಯಾವುದೇ ಕಾರಣಕ್ಕೂ ಮೃತದೇಹವನ್ನು ಇಲ್ಲಿಂದ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಮಾತನಾಡಿ ತಕ್ಷಣ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಡಿಎಫ್‌ಓ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಹುಲಿಯ ಸೆರೆಗೆ ಕ್ರಮ ಕೈಗೊಳ್ಳಬೇಕು, ನೊಂದ ಕುಟುಂಬಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ತಿಳಿಸಿದರು.