ಕುಶಾಲನಗರ, ಮಾ. ೨೯: ಕೊಡವ ಸಂಸ್ಕೃತಿ, ಆಚಾರ, ವಿಚಾರ ವಿಶ್ವದ ಎಲ್ಲೆಡೆ ಗುರುತಿಸಲ್ಪಟ್ಟಿದ್ದು, ಯುವಪೀಳಿಗೆಗೆ ಈ ಬಗ್ಗೆ ಅರಿವು ಜಾಗೃತಿ ಮೂಡಿಸಿ ಸಮುದಾಯದ ಏಳಿಗೆಗೆ ಸಮಾಜದ ಮೂಲಕ ಕಾರ್ಯ ಯೋಜನೆಗಳನ್ನು ರೂಪಿಸುವಂತಾಗಬೇಕು ಎಂದು ವಿಧಾನಪರಿಷತ್ ಸದಸ್ಯರಾದ ಮಂಡೇಪAಡ ಸುಜಾ ಕುಶಾಲಪ್ಪ ಕರೆ ನೀಡಿದ್ದಾರೆ.
ಅವರು ಕುಶಾಲನಗರ ಕೊಡವ ಸಮಾಜದಲ್ಲಿ ಏರ್ಪಡಿಸಲಾದ ಒತ್ತೋರ್ಮೆ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಮುದಾಯದ ಒಗ್ಗಟ್ಟು ಮೂಲಕ ಅಭಿವೃದ್ಧಿ ಏಳಿಗೆ ಸಾಧ್ಯ. ಸರಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಸಮಾಜಗಳು ಎಚ್ಚರವಹಿಸಬೇಕು. ನಾಡಿನ ನೆಲ, ಜಲ, ಭಾಷೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ತಮ್ಮ ಜಾಗ ಮಾರಾಟ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು. ಸಮಾಜದ ಮೂಲಕ ಬ್ಯಾಂಕ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವಾಗ ಬೇಕಾಗಿದೆ. ಈ ಮೂಲಕ ಸಮುದಾಯದ ಜನರಿಗೆ ಸಹಾಯ ಹಸ್ತ ಕಲ್ಪಿಸಲು ಸಾಧ್ಯ ಎಂದರು.
ಕೊಡವ ಸಂಸ್ಕೃತಿ ಆಚಾರ ವಿಶಿಷ್ಟವಾಗಿದ್ದು ಈ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸುವುದು ಸಮಾಜದ ಆದ್ಯ ಕರ್ತವ್ಯವಾಗಿದೆ ಎಂದರು. ಕೊಡವ ಸಮುದಾಯದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕದ ವಿಚಾರವಾಗಿದೆ ಎಂದ ಸುಜಾಕುಶಾಲಪ್ಪ ಪ್ರತಿ ಕುಟುಂಬ ಸದಸ್ಯರು ಈ ಬಗ್ಗೆ ಚಿಂತನೆ ಹರಿಸಬೇಕಾಗಿದೆ. ಪ್ರತಿಯೊಂದು ಕುಟುಂಬದಲ್ಲಿ ಮೂರರಿಂದ ನಾಲ್ಕು ಮಕ್ಕಳು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರಕಾರದ ಮೂಲಕ ಸಮಾಜಕ್ಕೆ ದೊರಕುವ ಅನುದಾನಗಳನ್ನು ಪಡೆಯುವಲ್ಲಿ ಸಮಾಜಗಳು ಕ್ರಿಯಾಯೋಜನೆ ರೂಪಿಸಬೇಕಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರ, ಗೋಣಿಕೊಪ್ಪ, ಮಕ್ಕಂದೂರು ಸಮಾಜಗಳ ಅಭಿವೃದ್ಧಿಗೆ ಅನುದಾನ ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಖಿಲ ಭಾರತ ಕಾಫಿ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಮಂದನೆರವAಡ ಸಿ ಪೊನ್ನಣ್ಣ ಮಾತನಾಡಿ, ಕೊಡವ ಸಮುದಾಯದ ಸಾಧಕರ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಬೇಕಾಗಿದೆ. ಪ್ರತಿಯೊಬ್ಬರೂ ಇತರರಿಗೆ ಮಾದರಿಯಾಗಿ ಜೀವನ ನಡೆಸಬೇಕು. ಸಾಧನೆಯ ಗುರಿಯತ್ತ ಯುವಪೀಳಿಗೆ ಸಾಗಬೇಕು ಎಂದರು. ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪAಡ ಬೋಸ್ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ಮಕ್ಕಳ ನೃತ್ಯ ಕಾರ್ಯಕ್ರಮ, ಹಾಡುಗಳ ಸ್ಪರ್ಧೆ ನಡೆಯಿತು. ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಉನ್ನತ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಇದೇ ಸಂದರ್ಭ ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರಿಗೆ ಮತ್ತು ಪ್ರಮುಖರಿಗೆ ಸನ್ಮಾನ ಮಾಡಲಾ ಯಿತು. ಸಮಾಜದ ಉಪಾಧ್ಯಕ್ಷ ಉಡುವೆರ ಹ್ಯಾರಿ, ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ ಮತ್ತು ಸಮಾಜದ ನಿರ್ದೇಶಕರು, ಮಾಜಿ ಅಧ್ಯಕ್ಷರು ಇದ್ದರು. ಚೆಪ್ಪುಡಿರ ರತನ್, ಕೊಕ್ಕಲೆರ ಧರಣಿ ಸೋಮಣ್ಣ ಕಾರ್ಯಕ್ರಮ ನಿರೂಪಿಸಿದರು.