ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶೇ. ೯೭.೫೯ರಷ್ಟು ವಿದ್ಯಾರ್ಥಿಗಳು ಹಾಜರು

ಬೆಂಗಳೂರು, ಮಾ. ೨೮: ಹತ್ತನೇ ತರಗತಿ ಪರೀಕ್ಷೆಯ ಮೊದಲ ದಿನವಾದ ಸೋಮವಾರ ರಾಜ್ಯದಾದ್ಯಂತ ಸುಸೂತ್ರವಾಗಿ ನಡೆದಿದೆ ಎಂದು ಪ್ರಾಥಮಿಕ ಮತ್ತು ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಹೇಳಿದ್ದಾರೆ. ಎರಡು ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ಮಕ್ಕಳು ಖುಷಿಯಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರು ಕೂಡ ಅತ್ಯಂತ ಉತ್ಸಾಹದಿಂದ ಪರೀಕ್ಷೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜನೆ, ಪೊಲೀಸ್ ಭದ್ರತೆ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಂಪೂರ್ಣ ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪರೀಕ್ಷೆ ಬರೆಯಲು ಹೆಸರು ದಾಖಲು ಮಾಡಿಕೊಂಡಿರುವ ವಿದ್ಯಾರ್ಥಿಗಳ ಪೈಕಿ ಶೇ. ೯೭.೫೯ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅನಾರೋಗ್ಯ ಕಾರಣ ೩೩೬ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲೇ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು. ಮುಖ್ಯ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಲು ಕನಿಷ್ಟ ೨ ಪೂರ್ವ ಸಿದ್ಧತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿತ್ತು. ಮಕ್ಕಳು ಭಯ ಇಲ್ಲದೇ ಪರೀಕ್ಷೆ ಬರೆಯಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ವಿದ್ಯಾರ್ಥಿಗಳು ಸರ್ಕಾರದ ಆದೇಶ, ನಿಯಮಗಳು, ರಾಜ್ಯ ಹೈಕೋರ್ಟ್ ತೀರ್ಪು, ಮಂಡಳಿಯಿAದ ನೀಡಲಾಗಿರುವ ಪರೀಕ್ಷೆ ಸೂಚನೆಗಳನ್ನು ಪಾಲಿಸಬೇಕು. ಮಕ್ಕಳಲ್ಲಿ ಶಿಸ್ತು, ಸಮಾನತೆ, ಏಕತೆಯ ಭಾವನೆ ಮೂಡಿಸುವ ಉದ್ದೇಶದಿಂದ ಸಮವಸ್ತç ನಿಯಮವನ್ನು ದಶಕಗಳ ಹಿಂದೆಯೇ ಜಾರಿಗೆ ತರಲಾಗಿದೆ. ನಿಯಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಯಾವುದೇ ವ್ಯಕ್ತಿಗಳು, ಸಂಘಟನೆಗಳು ಸಮವಸ್ತç ನಿಯಮ ಸಡಿಲಿಸಬೇಕು ಎಂಬ ಬೇಡಿಕೆಗೆ ಅರ್ಥವಿಲ್ಲ ಎಂದಿದ್ದಾರೆ.

ಇಮ್ರಾನ್ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

ಇಸ್ಲಾಮಾಬಾದ್, ಮಾ. ೨೮: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿ ಅಲ್ಲಾಡುತ್ತಿದ್ದು, ಅಧಿಕಾರದಿಂದ ಕೆಳಗೆ ಇಳಿಯುವುದು ಖಚಿತವಾಗಿದೆ. ಪಿಎಂ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯವನ್ನು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಇಂದು ಮಂಡಿಸಲಾಯಿತು. ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಮಂಡಿಸಿದ ಪ್ರಸ್ತಾವನೆಯ ಸದನದಲ್ಲಿ ಚರ್ಚೆಗೆ ಮಾತ್ರ ಬಾಕಿ ಉಳಿದುಕೊಂಡಿದೆ. ೩೪೨ರ ಸದಸ್ಯ ಬಲದ ಸಂಸತ್‌ನಲ್ಲಿ ವಿಪಕ್ಷಗಳು ಇಮ್ರಾನ್ ಸರ್ಕಾರವನ್ನ ಕಿತ್ತೊಗೆಯಲು ೧೭೨ ಸದಸ್ಯರ ಬೆಂಬಲವನ್ನು ಪಡೆಯುವ ವಿಶ್ವಾಸದಲ್ಲಿವೆ. ಆದರೆ ಸರ್ಕಾರವು ವಿಪಕ್ಷಗಳ ಪ್ರಯತ್ನವನ್ನು ವಿಫಲಗೊಳಿಸಲು ಸದನದಲ್ಲಿ ಅಗತ್ಯವಿರುವ ಬೆಂಬಲವನ್ನು ಪಡೆಯುತ್ತದೆ ಎಂದು ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ. ಆದರೆ, ಇದೆಲ್ಲವೂ ತಾ. ೩೧ರಂದು ನಿರ್ಧಾರವಾಗಲಿದೆ. ತಾ. ೩೦ರವರೆಗೆ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯನ್ನು ಮುಂದೂಡಲಾಗಿದೆ. ತಾ. ೩೧ರಂದು ಇಮ್ರಾನ್ ಖಾನ್ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯ ಚರ್ಚೆಗೆ ಬರುವ ಸಾಧ್ಯತೆ ಇದೆ.

ಹಿಜಾಬ್ ನಿಷೇಧ: ಬಳ್ಳಾರಿಯಲ್ಲಿ ೧೦ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು

ಬಳ್ಳಾರಿ, ಮಾ. ೨೮: ಶಾಲಾ-ಕಾಲೇಜ್‌ಗಳಲ್ಲಿ ಹಿಜಾಬ್ ನಿಷೇಧಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬಳ್ಳಾರಿ-ಈಸ್ಟ್ ಬ್ಲಾಕ್‌ನಲ್ಲಿ ೧೦ ವಿದ್ಯಾರ್ಥಿನಿಯರು ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರಥಮ ಭಾಷೆಯ ಪತ್ರಿಕೆಗೆ ಗೈರುಹಾಜರಾಗಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪರೀಕ್ಷೆಯ ಮೊದಲ ದಿನವಾದ ಇಂದು ಈ ೧೦ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಳ್ಳಾರಿ-ಪೂರ್ವ ಬ್ಲಾಕ್‌ನಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದರು. ಆದರೆ ಹಿಜಾಬ್ ಧರಿಸಿದರೆ ಪರೀಕ್ಷಾ ಕೇಂದ್ರಕ್ಕೆ ಬಿಡುವುದಿಲ್ಲ ಎಂದು ಅಧಿಕಾರಿಗಳು ಅವರಿಗೆ ಹೇಳಿದ್ದಾರೆ. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ವಾಪಸ್ ತಮ್ಮ ಮನೆಗೆ ತೆರೆಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಳ್ಳಾರಿ-ಪೂರ್ವ ಬ್ಲಾಕ್ ಹೊರತುಪಡಿಸಿ, ಕಲ್ಯಾಣ ಕರ್ನಾಟಕ ಪ್ರದೇಶದ ಉಳಿದ ೫ ಜಿಲ್ಲೆಗಳಲ್ಲಿ ಯಾವುದೇ ಘಟನೆಗಳು ವರದಿಯಾಗಿಲ್ಲ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಶಿಸ್ತಿನ ವರ್ತನೆ; ಐವರು ಬಿಜೆಪಿ ಶಾಸಕರ ಅಮಾನತು

ಕೋಲ್ಕತ್ತಾ, ಮಾ. ೨೮: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರು ಸೋಮವಾರ ಅಮಾನತುಗೊಳಿಸಿದ್ದಾರೆ. ಸುವೇಂದು ಅಧಿಕಾರಿ ಸೇರಿ ಬಿಜೆಪಿ ಶಾಸಕರಾದ ದೀಪಕ್ ಬುರ್ಮನ್, ಶಂಕರ್ ಘೋಷ್, ಮನೋಜ್ ತಿಗ್ಗಾ ಮತ್ತು ನರಹರಿ ಮಹತೋ ಅವರನ್ನು ಅಮಾನತುಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ ರಾಮಪುರಹತ್ ಹತ್ಯಾಕಾಂಡದ ಬಗ್ಗೆ ಚರ್ಚೆಗೆ ಸುವೇಂದು ಅಧಿಕಾರಿ ಪಟ್ಟು ಹಿಡಿದಿದ್ದರು. ಆಗ ಬಿಜೆಪಿ ಮುಖ್ಯ ಸಚೇತಕ ಮನೋಜ್ ತಿಗ್ಗಾ ಮೇಲೆ ಹಲ್ಲೆ ನಡೆಸಲಾಗಿದೆ. ಟಿಎಂಸಿ ಶಾಸಕ ಅಸೀತ್ ಮಜುಂದಾರ್‌ಗೂ ಗಲಾಟೆಯಲ್ಲಿ ಗಾಯಗಳಾಗಿವೆ. ಈ ಘಟನೆಯ ಬಳಿಕ ಐವರು ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿಪಕ್ಷಗಳು ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚೆಗೆ ಒತ್ತಾಯಿಸಿದವು. ಸರಕಾರವು ಅದಕ್ಕೆ ನಿರಾಕರಿಸಿತು. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ವಿಧಾನಸಭೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಶಾಸಕರು ಹೊಡೆದಾಡಿಕೊಂಡಿದ್ದಾರೆ. ಘಟನೆ ಕುರಿತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಾತನಾಡಿ, ಆಡಳಿತ ಪಕ್ಷದವರು ನಮ್ಮ ಶಾಸಕರೊಂದಿಗೆ ಘರ್ಷಣೆಗೆ ಸಿವಿಲ್ ಡ್ರೆಸ್‌ನಲ್ಲಿ ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಯನ್ನು ಕರೆತಂದರು.ವಿಧಾನಸಭೆಯ ಒಳಗೂ ಶಾಸಕರು ಸುರಕ್ಷಿತವಾಗಿಲ್ಲ. ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದಂತೆ ನಮ್ಮ ೮-೧೦ ಶಾಸಕರನ್ನು ಕೆಲವು ಟಿಎಂಸಿ ಶಾಸಕರು ಥಳಿಸಿದ್ದಾರೆಂದು ಆರೋಪಿಸಿದ್ದಾರೆ.

ಮೆಕ್ಸಿಕೋದಲ್ಲಿ ಗುಂಡಿನ ದಾಳಿ, ೧೯ ಮಂದಿ ಸಾವು

ಮೆಕ್ಸಿಕೋ ಸಿಟಿ, ಮಾ. ೨೮: ಸೆಂಟ್ರಲ್ ಮೆಕ್ಸಿಕೋದಲ್ಲಿ ಭಾನುವಾರ ೧೯ ಜನರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಟೇಟ್ ಅಟಾರ್ನಿ ಜನರಲ್ ಕಚೇರಿ (ಎಫ್‌ಜಿಇ) ಪ್ರಕಟಣೆಯಲ್ಲಿ ತಿಳಿಸಿದೆ. ಮೈಕೋಕಾನ್ ರಾಜ್ಯದ ಲಾಸ್ ಟಿನಾಜಾಸ್ ಪಟ್ಟಣದಲ್ಲಿ ಹಬ್ಬದ ಸಭೆಯ ಮೇಲೆ ದಾಳಿಯ ವರದಿಗಳ ನಂತರ ರಾತ್ರಿ ಸುಮಾರು ೧೦.೩೦ಕ್ಕೆ ಈ ದುರ್ಘಟನೆ ನಡೆದಿದೆ. ೧೬ ಪುರುಷರು ಮತ್ತು ಮೂವರು ಮಹಿಳೆಯರು ಸೇರಿದಂತೆ ೧೯ ದೇಹಗಳು ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗುಂಡಿನ ಗಾಯಗಳು ಪತ್ತೆಯಾಗಿವೆ. ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ. ಈ ಗುಂಡಿನ ದಾಳಿಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ರಾಜ್ಯಗಳಾದ ಮೈಕೋಕಾನ್ ಮತ್ತು ನೆರೆಯ ಗುವಾನುಜುಟೊವೊ ಮಾದಕವಸ್ತು ಕಳ್ಳಸಾಗಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ನಡುವೆ ಈ ರೀತಿಯ ಜಗಳಗಳು ನಡೆಯುತ್ತವೆ ಎಂದು ಹೇಳಲಾಗಿದೆ.