ಸೋಮವಾರಪೇಟೆ, ಮಾ.೨೮: ಕಳೆದ ೩ ತಿಂಗಳಿನಿAದ ಸ್ಥಗಿತಗೊಂಡಿದ್ದ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಆಲೇಕಟ್ಟೆ ರಸ್ತೆ ಕಾಮಗಾರಿ, ಸಾರ್ವಜನಿಕರ ಪ್ರತಿಭಟನೆಯ ಬೆನ್ನಲ್ಲೇ ಮತ್ತೆ ಆರಂಭಗೊAಡಿದೆ.
ಲೋಕೋಪಯೋಗಿ ಇಲಾಖೆ ಮೂಲಕ ಆಯವ್ಯಯ ಅನುದಾನದಡಿ ರೂ. ೧ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿ ಪ್ರಾರಂಭವಾಗಿದ್ದು, ಕಳೆದ ೩ ತಿಂಗಳ ಹಿಂದೆ ರಸ್ತೆಬದಿಯಲ್ಲಿ ಚರಂಡಿ ನಿರ್ಮಿಸಲಾಗಿತ್ತು.
ಇದಾದ ನಂತರ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸದೇ ಗುತ್ತಿಗೆದಾರ ವಿಳಂಬ ಧೋರಣೆ ತಾಳಿದ್ದರು. ಈ ಬಗ್ಗೆ ಸ್ಥಳೀಯರು ಲೋಕೋಪಯೋಗಿ ಇಲಾಖೆಗೆ ಒತ್ತಡ ಹೇರಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆ ಕಳೆದ ಒಂದು ತಿಂಗಳ ಹಿಂದೆ ಸಾರ್ವಜನಿಕರು ಪೊಲೀಸ್ ಠಾಣೆಗೆ ತೆರಳಿ ರಸ್ತೆ ತಡೆ ನಡೆಸುವುದಾಗಿ ತಿಳಿಸಿದ್ದರು.
ಈ ಸಂದರ್ಭ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರು, ಸಂಬAಧಿಸಿದ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್ ಅವರನ್ನು ಠಾಣೆಗೆ ಕರೆಸಿ, ಸಾರ್ವಜನಿಕರ ಬೇಡಿಕೆಯನ್ನು ತಿಳಿಸಿದ್ದರು. ಈ ಸಂದರ್ಭ ಮೂರು ದಿನಗಳ ಒಳಗೆ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದ್ದರು.
ಇದಾಗಿ ತಿಂಗಳು ಕಳೆದರೂ ಕಾಮಗಾರಿ ಆರಂಭಗೊಳ್ಳದ ಹಿನ್ನೆಲೆ ಸ್ಥಳೀಯರು ಇಂದು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇದರಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ನೂರಾರು ವಾಹನಗಳು ನಿಲುಗಡೆಗೊಂಡು ಸಂಚಾರ ವ್ಯವಸ್ಥೆಗೆ ಧಕ್ಕೆಯಾಯಿತು.
ಪ್ರತಿಭಟನೆಯ ಮಾಹಿತಿ ಪಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ಕುಮಾರ್ ಸ್ಥಳಕ್ಕೆ ಆಗಮಿಸಿದ ಸಂದರ್ಭ ಪ್ರತಿಭಟನಾಕಾರರ ಆಕ್ರೋಶ ಇಮ್ಮಡಿಯಾಯಿತು. ನಾಳೆಯಿಂದಲೇ ಕಾಮಗಾರಿ ಆರಂಭಿಸುವುದಾಗಿ ಇಂಜಿನಿಯರ್ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ಮಧ್ಯಾಹ್ನದಿಂದಲೇ ಕಾಮಗಾರಿ ಪ್ರಾರಂಭಿಸಬೇಕು. ಮಡಿಕೇರಿಯಿಂದ ಕಾರ್ಯಪಾಲಕ ಅಭಿಯಂತರರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.
ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಹೆಚ್.ಕೆ. ಗಂಗಾಧರ್, ಕಳೆದ ೩ ತಿಂಗಳಿನಿAದ ರಸ್ತೆಯಲ್ಲಿ ತಿರುಗಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊನ್ನೆ ಸುರಿದ ಮಳೆಗೆ ಗುಂಡಿಗಳಲ್ಲಿ ನೀರು ನಿಂತು ನಡೆದಾಡಲೂ ಕಷ್ಟಕರವಾಗಿದೆ. ಹಲವಷ್ಟು ಮಂದಿ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡಿದ್ದಾರೆ. ವಾಹನಗಳು ದುರಸ್ತಿಗೀಡಾಗುತ್ತಿವೆ. ಧೂಳಿನಿಂದಾಗಿ ಅಕ್ಕಪಕ್ಕದ ನಿವಾಸಿಗಳು ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ತಕ್ಷಣ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್ ಅವರು, ದೂರವಾಣಿ ಮೂಲಕ ಗುತ್ತಿಗೆದಾರರನ್ನು ಸಂಪರ್ಕಿಸಿ, ಪ್ರತಿಭಟನೆಯ ಮಾಹಿತಿ ನೀಡಿದರಲ್ಲದೇ ತಕ್ಷಣ ಕಾಮಗಾರಿ ಆರಂಭಿಸುವAತೆ ತಿಳಿಸಿದರು.
ನಂತರ ಸಾರ್ವಜನಿಕರು ಪ್ರತಿಭಟನೆಯನ್ನು ಕೈಬಿಟ್ಟರು. ಇದಾದ ಕೆಲ ಗಂಟೆಗಳಲ್ಲಿಯೇ ಯಂತ್ರ ಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಕೆಲಸಗಾರರು ಕಾಮಗಾರಿಯನ್ನು ಆರಂಭಿಸಿದರು. ಆಲೇಕಟ್ಟೆ ರಸ್ತೆಯಲ್ಲಿ ಕಳೆದ ಅನೇಕ ದಶಕಗಳಿಂದ ಗುಂಡಿಬಿದ್ದಿದ್ದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲು ಲೋಕೋಪಯೋಗಿ ಇಲಾಖೆಯಿಂದ ೧ ಕೋಟಿ ಅನುದಾನ ಬಿಡುಗಡೆ ಯಾಗಿದ್ದು, ಇದರಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಕಾಂಕ್ರಿಟ್ ಚರಂಡಿ ನಿರ್ಮಿಸಲಾಗಿದೆ. ಉಳಿದಂತೆ ೪೩೦ ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಬೇಕಿದ್ದು, ಸಾರ್ವಜನಿಕರ ಪ್ರತಿಭಟನೆಯ ನಂತರ ಇದೀಗ ಕಾಮಗಾರಿ ಆರಂಭ ಗೊಂಡಿದೆ.
ಪ್ರತಿಭಟನೆಯಲ್ಲಿ ಆಲೇಕಟ್ಟೆ ಭಾರತೀಯ ಯುವಕ ಸಂಘದ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಕೃಷ್ಣಮೂರ್ತಿ, ಆಟೋ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜನಾರ್ಧನ್, ಸಹ ಕಾರ್ಯದರ್ಶಿ ರಮೇಶ್ ಸೇರಿದಂತೆ ಚಾಲಕರು, ತಾ.ಪಂ. ಮಾಜೀ ಸದಸ್ಯೆ ತಂಗಮ್ಮ, ಚೌಡ್ಲು ಗ್ರಾ.ಪಂ.ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಉಪಾಧ್ಯಕ್ಷೆ ಮಂಜುಳಾ ಸುಬ್ರಮಣಿ, ಸದಸ್ಯರಾದ ಸುರೇಶ್‌ಶೆಟ್ಟಿ, ಸತ್ಯ, ಪ್ರವೀಣ್, ನತೀಶ್ ಮಂದಣ್ಣ, ಚೇತನ್, ವಿಶ್ವನಾಥ್, ಜ್ಯೋತಿ, ಪ್ರಮುಖರಾದ ಮೋಹನ್, ಉಮೇಶ್, ನೆಹರು, ಶ್ರೀಕಾಂತ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.