ಕುಶಾಲನಗರ, ಮಾ. ೨೮ ಕೇಂದ್ರ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಕಾರ್ಮಿಕರ ಜಂಟಿ ಕ್ರಿಯಾ ವೇದಿಕೆ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ಗ್ರಾ.ಪಂ. ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಕಾರ್ಮಿಕರಿಗೆ ಕನಿಷ್ಟ ವೇತನ ರೂ. ೨೬೦೦೦ ನೀಡಬೇಕು, ನಿವೇಶನ ರಹಿತ ಕಾರ್ಮಿಕರಿಗೆ ಸರ್ಕಾರ ನಿವೇಶನ ಒದಗಿಸಲು ಕ್ರಮಕೈ ಗೊಳ್ಳಬೇಕು, ಜಿಲ್ಲೆಯಲ್ಲಿ ಕಾರ್ಮಿಕ ನ್ಯಾಯಾಲಯ ತಕ್ಷಣ ಪ್ರಾರಂಭಿಸ ಬೇಕು, ಕೊಡಗು ಜಿಲ್ಲೆಗೆ ರೈಲ್ವೇ ಯೋಜನೆ ಕೂಡಲೇ ಪ್ರಾರಂಭಿಸ ಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಬೇಕು. ಕೊಡಗು ಜಿಲ್ಲೆಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಯೋಜನೆ ರೂಪಿಸಬೇಕು, ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ನಗರ ಪ್ರದೇಶ ಗಳಿಗೂ ವಿಸ್ತರಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾರ್ವಜನಿಕ ಸಾಮಾಜಿಕ ಭದ್ರತೆ ಒದಗಿಸುವುದು, ಅಂಗನವಾಡಿ ಆಶಾ ಕಾರ್ಯಕರ್ತರು, ಬಿಸಿಯೂಟ ಮತ್ತಿತರ ನೌಕರರಿಗೆ ಶಾಸನಬದ್ಧ ಕನಿಷ್ಟ ವೇತನ ಮತ್ತು ಸಾಮಾಜಿಕ ಭದ್ರತೆ ಜಾರಿ ಮಾಡುವುದು, ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ನಂತರ ಉಪತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾ ಯಿತು. ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ನೌಕರರ ಸಂಘಟನೆ ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಎರಡು ದಿನಗಳ ಕಾಲ ರಾಷ್ಟçವ್ಯಾಪಿ ಮುಷ್ಕರ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಹಾಗೂ ನಾಳೆ ತಾ. ೨೯ ರಂದು (ಇಂದು) ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಚಳವಳಿ ಮತ್ತು ನಗರದಲ್ಲಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಪ್ರಮುಖರಾದ ಸಾವಿತ್ರಿ, ಕಾವೇರಮ್ಮ, ಮೋನಪ್ಪ, ಅಣ್ಣಯ್ಯ, ಸುಂದರ, ಮಂಜುಳಾ, ಉದಯನ್, ಭಾರತಿ ಮತ್ತಿತರರು ಇದ್ದರು.