ಮಡಿಕೇರಿ, ಮಾ. ೨೭: ಜಿಲ್ಲಾ ಕೇಂದ್ರ ಮಡಿಕೇರಿಗೆ ನಿನ್ನೆ ಸಂಜೆ ೫.೩೦ರ ವೇಳೆಯಲ್ಲಿ ಧಾರಾಕಾರ ಮಳೆ ಸುರಿದಿತ್ತು... ಈ ಮಳೆಯ ನಡುವೆ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸನಿಹದ ಮನೆಯೊಂದರ ಅಂಗಳದಲ್ಲಿ ಎರಡು ಅತಿಥಿಗಳು ಅತ್ತಿಂದಿತ್ತ ಓಡಾಡುತ್ತಿದ್ದು, ಮನೆಯವರಿಗೆ ಅಚ್ಚರಿ ಮೂಡಿಸಿತ್ತು.

ಇವು ಕಾಡಿನಿಂದ ಬಂದ ಅತಿಥಿಗಳು... ಸುಮ್ಮನೆ ಬಂದಿರಲಿಲ್ಲ. ತಮಗೆ ದೈವದತ್ತವಾಗಿ ಬಂದಿರುವ, ತಮ್ಮ ಮೈಮೇಲೆ ಇರುವ ಮುಳ್ಳುಗಳನ್ನು ಅರಳಿಸಿ ನಿಂತಿದ್ದವಲ್ಲದೆ ಗೆಜ್ಜೆ ಅಲುಗಾಡಿಸಿದಂತಹ ಶಬ್ಧ ಮಳೆಯ ನಡುವೆ ಕೇಳಿಬಂದಿತ್ತು... ಇವು ಯಾವ ಅತಿಥಿಗಳೆನ್ನುವಿರಾ..?

ಮುಳ್ಳು ಹಂದಿಗಳು... ಸಾಧಾರಣವಾಗಿ ಹಗಲಿನ ವೇಳೆ ಕಂಡುಬಾರದ ಇವು ಅದು ಹೇಗೋ ಕಾಡಿನಿಂದ ನಾಡಿಗೆ ಆಗಮಿಸಿತ್ತು... ಅಲ್ಲಿನ ನೆಲ್ಲಮಕ್ಕಡ ಕುಸುಮ ಅವರ ಮನೆಯಂಗಳದಲ್ಲಿ ಈ ಅತಿಥಿಗಳು ಪ್ರತ್ಯಕ್ಷವಾಗಿದ್ದವು... ಮನೆಮಂದಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದು ‘ವೈರಲ್’ ಆಗಿದೆ. ಶಬ್ಧ ಮಾಡುತ್ತಿದ್ದಂತೆ ಕಾಂಪೌAಡ್ ಒಳಗಿನಿಂದ ಮೆಲ್ಲನೆ ಗೇಟ್ ದಾಟಿ ಮುಖ್ಯ ರಸ್ತೆಯತ್ತ ಧಾವಿಸಿದ ಈ ಕಾಡಿನ ಅತಿಥಿಗಳು ಮರೆಯಾಗಿವೆ. -ಶಶಿ