ವೀರಾಜಪೇಟೆ, ಮಾ. ೨೬: ವೀರಾಜಪೇಟೆ ಭಾಗದ ರಸ್ತೆಗಳ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ರೂ. ೮ ಕೋಟಿ ಅನುದಾನವನ್ನು ಸರ್ಕಾರ ನೀಡಿದ್ದು, ಈ ಅನುದಾನದಲ್ಲಿ ಅನೇಕ ರಸ್ತೆಗಳ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮರದಿಂದ ಬಬ್ರಾಡ್ ಕುಪ್ಪಮೊಟ್ಟೆ ಸಂಪರ್ಕದ ಕಾಂಕ್ರೀಟ್ ರಸ್ತೆಗೆ ಕಾವೇರಿ ನೀರಾವರಿ ನಿಗಮದ ರೂ. ೬೦ ಲಕ್ಷ ಅನುದಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕರು ಬಳಿಕ ಮಾತನಾಡಿ, ಗ್ರಾಮೀಣ ಭಾಗದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ಜಿಲ್ಲಾ ಪಂಚಾಯಿತಿ ಮೂಲಕ ೧ ಕೋಟಿ ೫ ಲಕ್ಷ ಅನುದಾನ ನೀಡಿದೆ. ಕೆದಮುಳ್ಳೂರು-ಬೀಟಿಕಾಡು ಸಂಪರ್ಕ ರಸ್ತೆಗೆ ೯.೮೦ ಲಕ್ಷ, ಗ್ರಾ.ಪಂ. ಆರೋಗ್ಯ ಉಪಕೇಂದ್ರದ ಕ್ಷೇಮ ಕೇಂದ್ರ ನಿರ್ಮಾಣ ರೂ. ೬ ಲಕ್ಷ ಹಾಗೂ ಬಾರಿಕಾಡು, ಬೂದಿಮೊಳ, ಮಡಿವಾಳ ರಸ್ತೆ, ಪಾಲಂಗಾಲ ಪೊಟ್ಟಡ ದೇವಸ್ತಾನ ರಸ್ತೆ ಸೇರಿದಂತೆ ಪಂಚಾಯಿತಿಯ ಎಲ್ಲಾ ೨೮ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಂದಿದ್ದು ಕಾಮಗಾರಿ ನಡೆಯಲಿದೆ ಎಂದು ಬೋಪಯ್ಯ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವ ಹಿನ್ನೆಲೆ ರಸ್ತೆಗಳು ದುಸ್ತಿತಿಯಲ್ಲಿದ್ದು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೋಪಯ್ಯ ಅವರು ಸರ್ಕಾರದಿಂದ ಅನುದಾನ ತಂದಿದ್ದಾರೆ. ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳ ಕಾಮಗಾರಿಯನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದರು. ಕಾಂಕ್ರೀಟ್ ರಸ್ತೆಗೆ ಭೂಮಿಪೂಜೆ ಸಂದರ್ಭ ಕೆದಮುಳ್ಳೂರು ಗ್ರಾ,ಪಂ, ಅಧ್ಯಕ್ಷೆ ಎನ್.ಎಂ. ಶೀಲಾ, ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ರಾಮಯ್ಯ, ಜಯಂತಿ, ಕಾವೇರಿ ನೀರಾವರಿ ನಿಗಮದ ಅಭಿಯಂತರ ಶಿವಕುಮಾರ್, ಗುತ್ತಿಗೆದಾರ ರೋಹಿತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು