ಪೊನ್ನಂಪೇಟೆ, ಮಾ. ೨೫: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಐ.ಕ್ಯೂ.ಎ.ಸಿ. ಸೆಲ್ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ನನ್ನ ಕೃತಿ - ನನ್ನ ಮಾತು' ವಿಶೇಷ ಉಪನ್ಯಾಸ ಮಾಲಿಕೆಗೆ ಚಾಲನೆ ನೀಡಲಾಯಿತು.
ಸಾಹಿತಿಗಳಾದ ಸುನೀತ ಕುಶಾಲನಗರ ತಮ್ಮ ಉಪನ್ಯಾಸದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಮಾತನಾಡಿ ಸಾಹಿತ್ಯ ಪರಂಪರೆಯ ಆಳವಾದ ಜ್ಞಾನ ಹಾಗೂ ವರ್ತಮಾನದ ಸೂಕ್ಷö್ಮ ಅರಿವು ಮೇಳೈಸಿದಾಗ ಉತ್ತಮ ಸಾಹಿತ್ಯ ಮೂಡುತ್ತದೆ. ಸಾಹಿತಿಗಳು ಹೆಚ್ಚು ಅಧ್ಯಯನ ಶೀಲರಾಗಬೇಕು. ನಮ್ಮ ಅನುಭವಕ್ಕೆ ಬಂದ ಕೆಲವು ಘಟನೆಗಳು ನಮ್ಮನ್ನು ಕಾಡಿದಾಗ ಅದು ಸಾಹಿತ್ಯವಾಗಿ ಹೊರಹೊಮ್ಮುತ್ತದೆ ಎಂದರು. ದ್ವಿತೀಯ ಬಿ.ಕಾಂ. ಕನ್ನಡ ಪಠ್ಯಪುಸ್ತಕದಲ್ಲಿರುವ ತಮ್ಮ ‘ಕಲ್ಲುಮೊಟ್ಟೆ' ಕತೆಯ ಬಗ್ಗೆ ಮಾತನಾಡುತ್ತಾ ಪ್ರಾಕೃತಿಕ ವಿಕೋಪದಿಂದ ಮನುಷ್ಯನ ವೈಯಕ್ತಿಕ ಬದುಕಿನಲ್ಲಿ ಉಂಟಾಗುವ ತಲ್ಲಣಗಳನ್ನು ಈ ಕತೆಯಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ ಎಂದರು. ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಸಾಹಿತ್ಯದ ಓದು ಇದಕ್ಕೆ ಪೂರಕವಾಗಲಿದೆ ಎಂದರು.
ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಕರಾದ ಡಾ. ಸಿ.ಎಂ. ರೇವತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭ ಕನ್ನಡ ವಿಭಾಗದ ಉಪನ್ಯಾಸಕರಾದ ಆರ್. ತಿಪ್ಪೇಸ್ವಾಮಿ, ಎಸ್.ಎಂ. ರಜನಿ ಇನ್ನಿತರರು ಉಪಸ್ಥಿತರಿದ್ದರು.