ಕೂಡಿಗೆ, ಮಾ. ೨೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವರ ಹೊಸೂರು ಗ್ರಾಮದ ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯು ಹುದುಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ರೀಡಾಂಗಣದಲ್ಲಿ ನಡೆಯಿತು.
ನೀರು ಬಳಕೆದಾರ ಸಂಘದ ಮಾಜಿ ಅಧ್ಯಕ್ಷ ಐ.ಎಸ್. ಗಣೇಶ್ ಪಂದ್ಯಾಟಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಯುವ ಜನಾಂಗ ಸಂಘಟಿತರಾದರೆ ಮಾತ್ರ ಸಮಾಜದ ಅಭಿವೃದ್ಧಿಯಾಗುತ್ತದೆ ಗ್ರಾಮಾಂತರ ಪ್ರದೇಶಗಳಲ್ಲಿ ಕ್ರೀಡಾಕೂಟಗಳ ಆಯೋಜನೆಗಳಿಂದ ಗ್ರಾಮಸ್ಥರು ಒಗ್ಗೂಡುವಿಕೆ ಮೂಲಕ ಸೇವಾ ಮನೋಭಾವದಿಂದ ಗ್ರಾಮಾಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು ಎಂದರು. ಹುದುಗೂರು ಶ್ರೀ ಉಮಾ ಮಹೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾಕೂಟಗಳು ನಡೆಯುವುದರಿಂದ ಸೌಹಾರ್ಧ ಮನೋಭಾವ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಪೂರಕವಾಗುವುದು. ಗ್ರಾಮೀಣ ಪ್ರದೇಶಗಳ ಯುವಕ-ಯುವತಿಯರ ಸಂಘಗಳಿಗೆ ಸರಕಾರದಿಂದ ಸಿಗುವ ಸಲವತ್ತು ಸದುಪಯೋಗಪಡಿಸಿಕೊಂಡು ಗ್ರಾಮದ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕೆAದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಶರತ್ ವಹಿಸಿದ್ದರು. ವೇದಿಕೆಯಲ್ಲಿ ಕೂಡಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶೋಭ ಪುಟ್ಟಪ್ಪ, ಟಿ.ಎಂ. ಚಿಣ್ಣಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ ಯುವಕ ಸಂಘದ ಮಾಜಿ ಅಧ್ಯಕ್ಷ ಕುಮಾರಪ್ಪ, ಗಿರೀಶ್ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಎರಡೂ ತಾಲೂಕಿನ ೧೮ ತಂಡಗಳು ಭಾಗವಹಿಸಿದ್ದವು.