ಮುಳ್ಳೂರು, ಮಾ. ೨೫: ಹಳ್ಳಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ತಾಯಿಬೇರಾಗಿದೆ. ಭಾಷಾಭಿವೃದ್ಧಿ ಯಲ್ಲಿ ಹಳ್ಳಿಗಳ ಪಾತ್ರ ಮುಖ್ಯ ಎಂದು ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಕೇಶವಕಾಮತ್ ಅಭಿಪ್ರಾಯಪಟ್ಟರು. ಗುಡುಗಳಲೆ ಜಾತ್ರ‍್ರಾ ಮೈದಾನದಲ್ಲಿರುವ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕಸಾಪ ಶನಿವಾರಸಂತೆ ಹೋಬಳಿ ಘಟಕದ ಸದಸ್ಯರ ಸಭೆ ಮತ್ತು ಘಟಕದ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಕಸಾಪ ಸಂಘಟನೆ ಮುಂದಿನ ೫ ವರ್ಷಗಳ ಅವಧಿಯಲ್ಲಿ ಜನರು ನೆನಪಿಸಿಕೊಳ್ಳುವ ಕಾರ್ಯವನ್ನು ಮಾಡಬೇಕೆಂಬ ಉದ್ದೇಶದಿಂದ ಕಸಾಪ ಹೋಬಳಿ, ತಾಲೂಕು ಘಟಕಗಳನ್ನು ರಚಿಸಲಾಗುತ್ತಿದೆ. ಅದಲ್ಲದೆ ಘಟಕಗಳಿಗೆ ಸದಸ್ಯತ್ವ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಕಸಾಪ ಜಿಲ್ಲಾ ಘಟಕದಲ್ಲಿ ೫೦ ಸಾವಿರಕಿಂತ ಹೆಚ್ಚಿನ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳಬೇಕೆAಬ ಗುರಿ ಇದ್ದು ಈ ನಿಟ್ಟಿನಲ್ಲಿ ಹೋಬಳಿ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರಿಸಿಕೊಳ್ಳಬೇಕು, ಹಳ್ಳಿ, ಪಟ್ಟಣ, ತಾಲೂಕು, ಜಿಲ್ಲಾ ಕಸಾಪ ಘಟಕಗಳು ಬಲಪಟ್ಟರೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಪ್ರತಿಯೊಂದು ಹೋಬಳಿ, ತಾಲೂಕು ಘಟಕಗಳಲ್ಲಿ ಕಸಾಪ ಕಚೇರಿಯ ವ್ಯವಸ್ಥೆ ಇರಬೇಕು, ಹೋಬಳಿ ಘಟಕ ಮೂಲಕ ಸಾಹಿತ್ಯ ದತ್ತಿನಿಧಿ ಸ್ಥಾಪನೆಯಾಗುವ ಮೂಲಕ ಕನ್ನಡ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.

ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕಸಾಪ ಸಂಘಟನೆ ಪ್ರತಿಯೊಂದು ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸ್ಥಾಪನೆಯಾಗುವ ಮೂಲಕ ಕನ್ನಡ ಗ್ರಾಮಸಿರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಇದರ ಮಾಹಿತಿಯನ್ನು ಹೋಬಳಿ, ತಾಲೂಕು ಮತ್ತು ಜಿಲ್ಲಾ ಕಸಾಪ ಘಟಕಗಳಿಗೆ ಕಳುಹಿಸಿಕೊಡುವಂತಾಗಬೇಕು ಮತ್ತು ಘಟಕಗಳಿಗೆ ಸದಸ್ಯತ್ವ ಆಂದೋಲನ ಹೆಚ್ಚಾಗುವ ಅಗತ್ಯ ಇದೆ ಎಂದರು.

ಈ ಸಂದರ್ಭ ಕಸಾಪ ಹೋಬಳಿ ಘಟಕವನ್ನು ಪುನರ್ ರಚಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ವಿಜೇತ, ಹೋಬಳಿ ಘಟಕದ ಅಧ್ಯಕ್ಷ ಬಿ.ಬಿ. ನಾಗರಾಜು, ಮಾಜಿ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಕಸಾಪ ಪ್ರಮುಖರಾದ ಜಿ.ಎಂ. ಕಾಂತರಾಜು, ಎಚ್.ಬಿ. ಜಯಮ್ಮ, ನಂಗಾರು ಕೀರ್ತಿ ಪ್ರಸಾದ್, ಶ.ಗ. ನಯನತಾರ ಪ್ರಕಾಶ್‌ಚಂದ್ರ, ಕೆ.ಪಿ. ಜಯಕುಮಾರ್, ಎಸ್.ಎಂ. ಮಹೇಶ್, ಮಂಜುನಾಥ್, ಡಿ.ಬಿ. ಸೋಮಪ್ಪ, ಸುನಂದ ಮುಂತಾದವರಿದ್ದರು.

ಪದಾಧಿಕಾರಿಗಳ ಆಯ್ಕೆ

ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪಿ. ಶಾಂತಮಲ್ಲಪ್ಪ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿಗಳಾಗಿ ಡಿ.ಹೆಚ್. ಶಾಂತಕುಮಾರ್ ಮತ್ತು ಜಿ.ಪಿ. ಕವಿತ ಹಾಗೂ ಗೌರವ ಕೋಶಾಧಿಕಾರಿಯಾಗಿ ಡಾ. ಸಿ.ಆರ್. ಉದಯ ಕುಮಾರ್ ಆಯ್ಕೆಯಾಗಿದ್ದಾರೆ. ಕೊಡ್ಲಿಪೇಟೆಯ ಡಾ. ಉದಯ್ ಕುಮಾರ್ ಅವರ ಸಭಾಂಗಣದಲ್ಲಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೊಡ್ಲಿಪೇಟೆ ಹೋಬಳಿ ಕ.ಸಾ.ಪ. ಸದಸ್ಯರ ಸಮಾಲೋಚನೆ ಮತ್ತು ಕಾರ್ಯಕಾರಿ ಸಮಿತಿ ಆಯ್ಕೆಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.