ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ

ಲಖನೌ, ಮಾ. ೨೫: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯೋಗಿ ಆದಿತ್ಯನಾಥ್ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಶುಕ್ರವಾರ ಪದಗ್ರಹಣ ಮಾಡಿದರು. ಅಟಲ್ ಬಿಹಾರ ವಾಜಪೇಯಿ ಎಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಯೋಗಿ ಆದಿತ್ಯನಾಥ್ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು. ಸುಮಾರು ೮೫,೦೦೦ ಜನರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಉತ್ತರ ಪ್ರದೇಶದ ನೂತನ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ

ಚAಡೀಗಢ, ಮಾ. ೨೫: ಪಂಜಾಬ್ ಮಾಜಿ ಶಾಸಕರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ ಮತ್ತು ಅವರು ಸೇವೆ ಸಲ್ಲಿಸಿದ ಪ್ರತಿ ಅವಧಿಗೆ ಪಿಂಚಣಿ ಪಡೆಯುವ ಅಭ್ಯಾಸವನ್ನು ತೆಗೆದುಹಾಕಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹೇಳಿದ್ದಾರೆ. ಪಂಜಾಬ್‌ನ ಮಾಜಿ ಶಾಸಕರು, ಅವರು ಎರಡು ಬಾರಿ, ಐದು ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯುತ್ತಾರೆ ಎಂದು ವೀಡಿಯೋ ಸಂದೇಶದಲ್ಲಿ ಮಾನ್ ತಿಳಿಸಿದ್ದಾರೆ. ಇದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದಿರುವ ಪಂಜಾಬ್ ಸಿಎಂ, ನಮ್ಮ ರಾಜಕೀಯ ನಾಯಕರು, ಶಾಸಕರು ಸೇರಿದಂತೆ, ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ನೀಡಿ ಎಂದು ಕೈ ಜೋಡಿಸಿ ಎಂದಿದ್ದಾರೆ.

ಪಾಕ್ ಪ್ರಧಾನಿ ವಿರುದ್ಧ ಮಂಡನೆಯಾಗದ ಅವಿಶ್ವಾಸ ನಿರ್ಣಯ

ಇಸ್ಲಾಮಾಬಾದ್, ಮಾ. ೨೫: ಪಾಕಿಸ್ತಾನದ ರಾಷ್ಟಿçÃಯ ಅಸೆಂಬ್ಲಿಯ ನಿರ್ಣಾಯಕ ಅಧಿವೇಶನದಲ್ಲಿ ವಿವಾದಿತ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ನಿಗದಿಯಾಗಿದ್ದ ಬಹು ನಿರೀಕ್ಷಿತ ಅವಿಶ್ವಾಸ ನಿರ್ಣಯ ಮಂಡನೆ ಸದಕ್ಯೆ ಮುಂದೂಡಿಕೆಯಾಗಿದೆ. ವಿರೋಧ ಪಕ್ಷಗಳ ಸಂಸದರ ತೀವ್ರ ಗದ್ದಲ, ಪ್ರತಿಭಟನೆಯ ನಡುವೆ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸದೆ ಅಧಿವೇಶನವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸದ ಖಯಾಲ್ ಜಮಾನ್ ಅವರ ನಿಧನದಿಂದಾಗಿ ತಾ. ೨೮ ರಂದು ಸಂಜೆ ೪ ಗಂಟೆಗೆ ಅಧಿವೇಶನ ಮುಂದೂಡಲಾಗಿದೆ ಎಂದು ರಾಷ್ಟಿçÃಯ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ತಿಳಿಸಿದ್ದಾರೆ. ಪಾಕಿಸ್ತಾನ ಸಂಸತ್ತಿನ ಸಂಪ್ರದಾಯದ ಪ್ರಕಾರ ಮೊದಲ ಅಧಿವೇಶನವು ಖಯಾಲ್ ಜಮಾನ್ ಅವರಿಗೆ ಗೌರವ ಸಲ್ಲಿಸಲು ಸೀಮಿತವಾಗಿದೆ. ಇಮ್ರಾನ್‌ಖಾನ್ ಅವರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಪಾಕಿಸ್ತಾನ ಅಳಿವಿನ ಅಂಚಿನತ್ತ ಸಾಗುತ್ತಿದೆ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ ೮ ರಂದು ವಿರೋಧ ಪಕ್ಷಗಳು ರಾಷ್ಟಿçÃಯ ಅಸೆಂಬ್ಲಿ ಸಚಿವಾಲಯದ ಮುಂದೆ ಅವಿಶ್ವಾಸ ನಿರ್ಣಯ ಸಲ್ಲಿಸಿದ್ದವು. ಇದರಿಂದಾಗಿ ಮಾರ್ಚ್ ೨೫ ರಂದು ಇಮ್ರಾನ್‌ಖಾನ್ ಅವರನ್ನು ಪದಚ್ಯುತಿಗೊಳಿಸಲು ಅವಿಶ್ವಾಸ ಗೊತ್ತುವಳಿ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಇಂದು ಖಯಾಲ್ ಜಮಾನ್ ಅವರ ನಿಧನದ ಕಾರಣದಿಂದಾಗಿ ಸಭೆಯನ್ನು ತಾ. ೨೮ಕ್ಕೆ ಮುಂದೂಡಲಾಗಿದೆ. ಅಂದು ಸಂಜೆ ೪ ಗಂಟೆಗೆ ಅಧಿವೇಶನ ನಡೆಯುವ ಸಾಧ್ಯತೆಯಿದೆ.

ಕೆಐಎಡಿಬಿ ಕಾಯ್ದೆ ತಿದ್ದುಪಡಿಯಿಂದ ಭೂ ಪರಿಹಾರ ಸುಲಭ

ಬೆಂಗಳೂರು, ಮಾ. ೨೫: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ನೀಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿಂದು ಶಾಸಕ ಎನ್.ಎ. ಹ್ಯಾರಿಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಾಯ್ದೆಗಳು ಪ್ರತ್ಯೇಕವಾಗಿದ್ದವು. ಇತ್ತೀಚಿಗೆ ಹಾಲಿ ಇದ್ದ ಕೆಐಎಡಿಬಿ ಕಾಯ್ದೆಗೆ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ತೊಂದರೆಯಾಗದAತೆ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಹೊಸ ಭೂ ಸ್ವಾಧೀನ ಕಾಯ್ದೆ ೨೦೧೩ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬAಧ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ಸರ್ಕಾರ ಯಾವುದೇ ವಿಳಂಬವಾಗದAತೆ ಪರಿಹಾರ ವಿತರಣೆ ಮಾಡಲಿದೆ ಎಂದರು. ಕೆಐಎಡಿಬಿ ಕಾಯ್ದೆ ಕಲಂ ೨೮/೪ ಅಡಿ ಅಂತಿಮ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ದರ ನಿಗದಿಪಡಿಸುವ ಸಲುವಾಗಿ ಸಂಬAಧಪಟ್ಟ ಜಿಲ್ಲಾಧಿಕಾರಿ, ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರೊಂದಿಗೆ ಸಮಾಲೋಚಿಸಿ ಮಾರ್ಗಸೂಚಿ ದರವನ್ನು ನಿಗದಿಪಡಿಸುತ್ತಾರೆ ಎಂದು ನಿರಾಣಿ ಮಾಹಿತಿ ನೀಡಿದರು.

ಪರೀಕ್ಷೆ ಹಾಲ್‌ಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ

ಬೆಂಗಳೂರು, ಮಾ. ೨೫: ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಧಾರವಾಡದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇತರ ಜಿಲ್ಲೆಗಳಲ್ಲಿಯೂ ಹಿಜಾಬ್ ವಿವಾದ ಪಸರಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ. ವಿದ್ಯಾರ್ಥಿಗಳು ಹೈಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು ಡ್ರೆಸ್‌ಕೋಡ್ ಪಾಲಿಸಬೇಕು ಎಂದು ಮನವಿ ಮಾಡಿದರು.

ಶಿವಸೇನಾ ಶಾಸಕನ ಆಸ್ತಿ ಜಪ್ತಿ

ಮುಂಬೈ, ಮಾ. ೨೫: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶಿವಸೇನಾ ಶಾಸಕ ಪ್ರತಾಪ್ ಸರ್ನಾಯಕ್ ಅವರ ೧೧.೩೫ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ. ಅಧಿಕೃತ ಮೂಲಗಳ ಪ್ರಕಾರ, ತನಿಖಾ ಸಂಸ್ಥೆಯು ನ್ಯಾಷನಲ್ ಸ್ಪಾಟ್ ಎಕ್ಸ್ಚೇಂಜ್ ಲಿಮಿಟೆಡ್ (ಎನ್‌ಎಸ್‌ಇಎಲ್) ವಂಚನೆಗೆ ಸಂಬAಧಿಸಿದ ಪ್ರಕರಣದಲ್ಲಿ ಪ್ರತಾಪ್ ಸರ್ನಾಯಕ್ ಹೊಂದಿರುವ ರೂ. ೧೧.೩೫ ಕೋಟಿ ಮೌಲ್ಯದ ನೆರೆಯ ಥಾಣೆ ಜಿಲ್ಲೆಯಲ್ಲಿ ಎರಡು ಫ್ಲಾಟ್‌ಗಳು ಮತ್ತು ಒಂದು ಜಮೀನನ್ನು ಜಪ್ತಿ ಮಾಡಿದೆ. ಇದರೊಂದಿಗೆ, ಈ ಪ್ರಕರಣದಲ್ಲಿ ಜಪ್ತಿ ಮಾಡಲಾದ ಆಸ್ತಿಗಳ ಒಟ್ಟು ಮೌಲ್ಯ ಈಗ ರೂ. ೩೨೫೪.೦೨ ಕೋಟಿ ತಲುಪಿದೆ. ಈ ಪ್ರಕರಣದಲ್ಲಿ ಆರೋಪಿಗಳು ಹೂಡಿಕೆದಾರರನ್ನು ವಂಚಿಸಲು ಕ್ರಿಮಿನಲ್ ಸಂಚು ರೂಪಿಸಿ, ಎನ್‌ಎಸ್‌ಇಎಲ್‌ನ ಪ್ಲಾಟ್‌ಫಾರ್ಮ್ನಲ್ಲಿ ವ್ಯಾಪಾರಕ್ಕೆ ಪ್ರೇರೇಪಿಸಿ, ನಕಲಿ ಗೋದಾಮಿನ ರಸೀದಿಗಳಂತಹ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಖಾತೆಗಳನ್ನು ಸುಳ್ಳಾಗಿಸಿ ಅಕ್ರಮ ಎಸಗಿದ್ದಾರೆ. ಪಿಎಂಎಲ್‌ಎ ಅಡಿಯಲ್ಲಿ ನಡೆಸಿದ ತನಿಖೆಯಲ್ಲಿ ವಿವಿಧ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಸಾಲಗಾರರು ಅಥವಾ ಎನ್‌ಎಸ್‌ಇಎಲ್‌ನ ಟ್ರೇಡಿಂಗ್ ಸದಸ್ಯರು ರಿಯಲ್ ಎಸ್ಟೇಟ್‌ಗೆ ಹೂಡಿಕೆ, ಬಾಕಿ ಇರುವ ಸಾಲಗಳ ಮರುಪಾವತಿ ಮತ್ತು ಇತರ ಚಟುವಟಿಕೆಗಳಿಗೆ ಬೇರೆಡೆಗೆ ತಿರುಗಿಸಿದ್ದಾರೆ ಎಂದು ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.