ಮಡಿಕೇರಿ, ಮಾ. ೨೩: ಭೂ ಮಂಜೂರಾತಿ ನಿಯಮ ೧೯೬೯ ರನ್ವಯ ಹಲವಾರು ಮಾಜಿ ಸೈನಿಕರು ಭೂ ಮಂಜೂರಾತಿಗೆ ಅರ್ಹರಿರುತ್ತಾರೆ. ಸರ್ಕಾರದ ಅಧಿಸೂಚನೆಯನ್ವಯ, ಸರಕಾರಿ ಜಮೀನು ಮಂಜೂರು ಮಾಡಲು ಸಾಧ್ಯವಾಗದವರಿಗೆ ರಾಜ್ಯ ಸರ್ಕಾರದ ಯಾವುದಾದರೂ ಪ್ರಸ್ತುತ ವಸತಿ ಯೋಜನೆಗಳಡಿಯಲ್ಲಿ ಉಚಿತವಾಗಿ ನಿವೇಶನ ಪಡೆಯಲು ಅವಕಾಶವಿರುತ್ತದೆ.

ಈ ಅಧಿಸೂಚನೆಯನ್ವಯ ಗ್ರಾಮೀಣ ಪ್ರದೇಶದಲ್ಲಿ ೨೪೦೦ ಚದರ ಅಡಿಗಳ ಮತ್ತು ಪಟ್ಟಣ ಪ್ರದೇಶಗಳಲ್ಲಿ ೧೨೦೦ ಚದರ ಅಡಿಗಳ ನಿವೇಶನವನ್ನು ಮಂಜೂರು ಮಾಡಲು ಅವಕಾಶವಿದೆ. ಪ್ರಸ್ತುತ ಲಭ್ಯವಿರುವ ರಾಜ್ಯ ಸರ್ಕಾರದ ವಸತಿ ಯೋಜನೆಗಳಡಿಯಲ್ಲಿ ಈ ಅಳತೆ ನಿವೇಶನಗಳನ್ನು ಮಂಜೂರು ಮಾಡಲು ಅವಕಾಶಗಳಿಲ್ಲದಿದ್ದಲ್ಲಿ, ಇದಕ್ಕಾಗಿಯೇ ವಿಶೇಷ ಯೋಜನೆ ರೂಪಿಸಬೇಕಿದೆ. ಆದ್ದರಿಂದ, ನಿವೇಶನ ಹೊಂದಲು ಬಯಸುವ ಮಾಜಿ ಸೈನಿಕರ ಸಂಖ್ಯೆಯನ್ನು ತಿಳಿದು ಜಿಲ್ಲಾಡಳಿತಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು, ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯೊಂದಿಗೆ ಮಾಜಿ ಸೈನಿಕರು ತಮ್ಮ ಮಾಜಿ ಸೈನಿಕರ ಗುರುತಿನ ಚೀಟಿಯನ್ನು ಲಗತ್ತಿಸಿ, ಏಪ್ರಿಲ್ ೩೦ ರೊಳಗೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.