ಗೋಣಿಕೊಪ್ಪಲು, ಮಾ. ೨೩: ಹೆಣ್ಣು ಅಂದರೆ ಸಮಾಜದ ಕಣ್ಣು, ಹೆಣ್ಣು ಅಬಲೆಯಲ್ಲ ಹೀಗಾಗಿ ಕರ್ನಾಟಕ ಸರ್ಕಾರ ಮಹಿಳೆಯರಿ ಗಾಗಿ ನೂರಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಂಜೀವಿನಿ ಒಕ್ಕೂಟದ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸಲು ಅವರು ಉತ್ಪಾದಿಸಿದ ಆಹಾರ ಪದಾರ್ಥಗಳನ್ನು ಒಂದೆಡೆ ಕ್ರೋಢೀಕರಿಸಿ ಆ ಮೂಲಕ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನೆ ನಿರ್ದೇಶಕ ಶ್ರೀಕಂಠಮೂರ್ತಿ ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ವೀರಾಜಪೇಟೆ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಬಾಳೆಲೆ ಪಟ್ಟಣದಲ್ಲಿ ಆಯೋಜನೆ ಗೊಳಿಸಲಾಗಿದ್ದ ಮಹಿಳೆಯರು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾಸಿಕ ಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಇವರು ಸರ್ಕಾರದ ಸವಲತ್ತುಗಳನ್ನು ಮಹಿಳೆಯ ಹೆಸರಿನಲ್ಲಿ ನೀಡುತ್ತಾ ಬರುತ್ತಿದೆ. ಸಂಸಾರವನ್ನು ನಿಭಾಯಿಸಬಲ್ಲ ಮಹಿಳೆ ವ್ಯವಸ್ಥೆಯ ಅಡಿಯಲ್ಲಿ ತಮ್ಮ ಸಂಸಾರವನ್ನು ಸರಿ ದಾರಿಯಲ್ಲಿ ನಡೆಸುತ್ತಾಳೆ ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಮಹಿಳೆಯರ ಮೂಲಕ ಅನುಷ್ಠಾನಗೊಳಿಸುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಯೊಂದಿಗೆ ಮಹಿಳೆಯು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು.
ಒಕ್ಕೂಟದ ಮೂಲಕ ಮಹಿಳೆ ಯರಿಗೆ ಈಗಾಗಲೇ ಈ ಭಾಗದಲ್ಲಿ ೭ ಲಕ್ಷ ಅನುದಾನವನ್ನು ಸರ್ಕಾರದ ವತಿಯಿಂದ ನೀಡಲಾಗಿದೆ. ಸುತ್ತು ನಿಧಿಯ ಮೂಲಕ ತಲಾ ೩೦ ಸಾವಿರ ಬಿಡುಗಡೆಗೊಳಿಸಲಾಗಿದೆ ಮಹಿಳೆ ಯರು ಈ ಹಣವನ್ನು ಒಕ್ಕೂಟದ ಮೂಲಕ ಬಳಕೆ ಮಾಡಿಕೊಂಡು ತಾವೇ ಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ತರಬೇಕು. ಮಾರುಕಟ್ಟೆ ವ್ಯವಸ್ಥೆಯನ್ನು ಇಲಾಖೆ ವತಿಯಿಂದ ಮಾಡಿಕೊಡಲಾಗುತ್ತಿದೆ. ಇದರ ಪ್ರಯೋಜನವನ್ನು ಪ್ರತಿ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಮಾತನಾಡಿ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆ ಮುಂದಿದ್ದಾಳೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಪ್ರತಿಭೆಯಿದ್ದರೂ ಇದನ್ನು ಹೊರ ಹಾಕಲು ಅವಕಾಶವಿರಲಿಲ್ಲ ಹೀಗಾಗಿ ಸರ್ಕಾರ ಮಹಿಳೆಯರಿಗಾಗಿ ವಿಶೇಷ ಯೋಜನೆಯ ಮೂಲಕ ಸಾಲ ಸೌಲಭ್ಯ ಒದಗಿಸಿ, ಆ ಮೂಲಕ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದೆ. ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಗ್ರಾಮ ಸಭೆ, ವಾರ್ಡ್ ಸಭೆಗಳಿಗೆ ತೆರಳಿ ಅಲ್ಲಿ ಮಾಹಿತಿಗಳನ್ನು ಪಡೆಯಬೇಕು ಅವುಗಳನ್ನು ಒಕ್ಕೂಟದಲ್ಲಿ ಚರ್ಚಿಸಿ ತಮಗೆ ಬೇಕಾದ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸಬೇಕು. ಇದನ್ನು ಮಾರುಕಟ್ಟೆಗೆ ತಂದಾಗ ತಮ್ಮ ಕೆಲಸಕ್ಕೆ ಉತ್ತಮ ಬೆಲೆ ಸಿಗುತ್ತದೆ. ಅಲ್ಲದೆ ಮಹಿಳೆಯರ ಜ್ಞಾನಾರ್ಜ ನೆಯು ಹೆಚ್ಚಾಗಲಿದೆ ಎಂದರು.
ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಕೇಶ್, ಉಪಾಧ್ಯಕ್ಷೆ ಕೊಕ್ಕೆಂಗಡ ಸ್ಮಿತ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಪಂಕಜ ಗಿರೀಶ್, ಛಾಯಾ ಮನೋಜ್, ಕೊಕ್ಕೆಂಗಡ ಸೌಮ್ಯ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುತ್ತಮುತ್ತಲಿನ ಸಂಜೀವಿನಿ ಒಕ್ಕೂಟದ ಸದಸ್ಯರು ತಾವೇ ಮನೆಯಲ್ಲಿ ತಯಾರಿಸಿದ ಮಸಾಲೆ ಪದಾರ್ಥಗಳು, ಜೇನು, ಜಾಮ್, ಹಪ್ಪಳ, ಉಪ್ಪಿನ ಕಾಯಿ, ಹೂವಿನ ಗಿಡಗಳು ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೂಲಕ ವ್ಯಾಪಾರ ನಡೆಸಿದರು. ಗ್ರಾಮದ ಜನರು ಮಹಿಳೆಯರು ಉತ್ಪಾದಿಸಿ ತಂದ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.
 
						