ಸೋಮವಾರಪೇಟೆ, ಮಾ. ೨೩: ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇಣಿಗೆ ಕೊರಳೊಡ್ಡಿದ ಸ್ವಾತಂತ್ರö್ಯ ಹೋರಾಟಗಾರರಾದ ಭಗತ್‌ಸಿಂಗ್, ರಾಜ್ ಗುರು ಹಾಗೂ ಸುಖ್‌ದೇವ್ ಅವರ ಸ್ಮರಣೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಪಟ್ಟಣದ ಆಂಜನೇಯ ದೇವಾಲಯದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಸಾಗಿಸಿ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸಮಾಪನ ಗೊಂಡಿತು. ಪಂಜು ಹಿಡಿದಿದ್ದ ನೂರಾರು ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಮೆರವಣಿಗೆ ಸಾಗಿದರು.

ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಬಿ.ಬಿ. ಭಾರತೀಶ್ ಅವರು, ಭಗತ್‌ಸಿಂಗ್, ರಾಜ್‌ಗುರು ಸುಖ್‌ದೇವ್ ಅವರ ವೀರ ಬಲಿದಾನದ ಬಗ್ಗೆ ಪ್ರತಿಯೋರ್ವ ಭಾರತೀಯನೂ ಸ್ಮರಿಸಿಕೊಳ್ಳಬೇಕು. ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ತರುಣ ಹೋರಾಟಗಾರರನ್ನು ಬಿಜೆಪಿ ಯುವ ಮೋರ್ಚಾ ಸ್ಮರಿಸುತ್ತಿರುವುದು ಶ್ಲಾಘನೀಯ ಎಂದರು.

ಪಠ್ಯ ಪುಸ್ತಕಗಳಲ್ಲಿ ನಿಜವಾದ ಸ್ವಾತಂತ್ರö್ಯ ಹೋರಾಟ ಗಾರರ ಜೀವನ ಚರಿತ್ರೆಯನ್ನು ಮರೆಮಾಚಲಾಗಿದೆ. ಇದನ್ನು ಸರಿಪಡಿಸಬೇಕಿದ್ದು, ದೇಶದ ಸ್ವಾತಂತ್ರö್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಕಲಿಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಶಂಕರ್, ರಾಜ್ಯ ಸಮಿತಿ ಸದಸ್ಯ ಮಹೇಶ್ ತಿಮ್ಮಯ್ಯ, ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಹೇರೂರು, ಕಾರ್ಯದರ್ಶಿ ಮೋಹಿತ್ ತಿಮ್ಮಯ್ಯ, ಉಸ್ತುವಾರಿ ರೂಪಾ ಸತೀಶ್, ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು ಸೇರಿದಂತೆ ಇತರರು ಭಾಗವಹಿಸಿದ್ದರು.

ಮಡಿಕೇರಿ: ನಗರ ಯುವ ಮೋರ್ಚಾ ಹಾಗೂ ಮಡಿಕೇರಿ ಗ್ರಾಮಾಂತರ ಮಂಡಳ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪಂಜಿನ ಮೆರವಣಿಗೆ ನಡೆಸಿ ಸ್ವಾತಂತ್ರö್ಯ ಹೋರಾಟಗಾರರನ್ನು ಸ್ಮರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಮಡಿಕೇರಿ ಮಂಡಳ ಅಧ್ಯಕ್ಷ ಕಾಂಗೀರ ಸತೀಶ್ ಬಿಜೆಪಿ ನಗರಾಧ್ಯಕ್ಷ ನವೀನ್ ಪೂಜಾರಿ, ಗ್ರಾಮಾಂತರ ಮಂಡಳ ಅಧ್ಯಕ್ಷ ಹೇಮಂತ್ ತೋರೆರ, ಜಿಲ್ಲಾ ಯುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ವಿನ್, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್, ಓಬಿಸಿ ಮೋರ್ಚಾ ಅಧ್ಯಕ್ಷ ರಾಜೇಶ್ ಸೇರಿದಂತೆ ಇನ್ನಿತರರು ಇದ್ದರು.