*ಗೋಣಿಕೊಪ್ಪ, ಮಾ. ೨೪: ಜಾತಿನಿಂದನೆ ದೌರ್ಜನ್ಯ ಕಾಯ್ದೆಯನ್ನು ಕಾರ್ಮಿಕ ನಾಯಕರು ಮತ್ತು ದಲಿತ ಮುಖಂಡರು ದುರುಪಯೋಗ ಪಡಿಸಿಕೊಂಡು ಬೆಳೆಗಾರರು ಮತ್ತು ರೈತರ ಮೇಲೆ ದೌರ್ಜನ್ಯ ಅಸ್ತçವಾಗಿ ಬಳಸಿ ಶೋಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತಪರವಾದ ನ್ಯಾಯ ಒದಗಿಸಬೇಕು ಎಂದು ಭಾರತೀಯ ಕಿಸಾನ್ ಸಂಘ ಜಿಲ್ಲಾ ಘಟಕ ವತಿಯಿಂದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಒತ್ತಾಯಿಸಿ ಮನವಿ ಸಲ್ಲಿಸಿದರು.

ಬೆಳೆಗಾರ ನವೀನ್ ಅವರ ಮೇಲೆ ಜಾತಿ ನಿಂದನೆ ಆರೋಪ ಹೊರಿಸಿ ದೂರು ದಾಖಲಿಸಿರುವುದು ಸತ್ಯಪರತೆಯನ್ನು ಹೊಂದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ಜಾತಿ ನಿಂದನೆ ಆರೋಪ ಹೊತ್ತಿರುವ ಬೆಳೆಗಾರರನ್ನು ಮುಕ್ತಗೊಳಿಸಬೇಕೆಂದು ಕಿಸಾನ್ ಸಂಘದ ಪದಾಧಿಕಾರಿಗಳು ತಾಲೂಕು ಪೊಲೀಸ್ ಉಪ ಅಧೀಕ್ಷಕ ಜಯಕುಮಾರ್ ಅವರಲ್ಲಿ ಮನವಿ ಮಾಡಿದರು.

ನವೀನ್ ಅವರ ತೋಟದ ಕಾರ್ಮಿಕನಾಗಿದ್ದ ವ್ಯಕ್ತಿ ಕಾರ್ಮಿಕ ನಾಯಕನ ಪ್ರಚೋದನೆಯ ಮಾತಿಗೆ ಬಲಿಯಾಗಿ ಮಾಲೀಕನ ವಿರುದ್ಧ ಸುಳ್ಳು ಆರೋಪ ಹೊರಿಸಿ ಮಾಲೀಕನನ್ನು ತಪ್ಪಿತಸ್ಥನನ್ನಾಗಿ ಮಾಡುವ ಹುನ್ನಾರ ನಡೆಸಲಾಗಿದೆ. ಕಾರ್ಮಿಕ ನಾಯಕನ ಲಾಭಕ್ಕಾಗಿ ಈ ಕೃತ್ಯ ನಡೆಯುತ್ತಿದೆ. ಇದರಿಂದ ಮಾಲೀಕ ಮತ್ತು ಕಾರ್ಮಿಕನ ನಡುವಿನ ಅವಿನಾಭಾವ ಸಂಬAಧ ಕಳಚುತ್ತಿದ್ದು, ಜಿಲ್ಲೆಯಲ್ಲಿ ಈ ಬೆಳವಣಿಗೆ ಅಹಿತಕರ ವಾತಾವರಣವನ್ನು ಸೃಷ್ಠಿಸುತ್ತಿದೆ ಎಂದು ಕಿಸಾನ್ ಸಂಘ ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡಲು ಮುಂದಾಯಿತು.

ಮಾಲೀಕರುಗಳ ಮೇಲೆ ಈಗಾಗಲೇ ತಾಲೂಕಿನಲ್ಲಿ ಸುಮಾರು ೨೫ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಕಾರ್ಮಿಕ, ಮಾಲೀಕನ ನಡುವೆ ಮನಸ್ಥಾಪಕ್ಕೆ ಕಾರಣವಾಗುತ್ತಿದೆ. ಜಾತಿ ನಿಂದನೆ, ದೌರ್ಜನ್ಯ ಕಾಯ್ದೆಗಳನ್ನು ಮುಖಂಡರುಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಈ ಮೂಲಕ ಸಾಬೀತಾಗುತ್ತಿದೆ. ಈ ಕಾರಣ ತನಿಖಾಧಿಕಾರಿಗಳು ನ್ಯಾಯಪರವಾಗಿ ತನಿಖೆ ನಡೆಸಿ ಅನ್ಯಾಯ ನಡೆಯುತ್ತಿರುವ ಬಗ್ಗೆ ಬೆಳಕು ಚೆಲ್ಲಿ ಕಾರ್ಮಿಕ ನಾಯಕ ಮತ್ತು ದಲಿತ ಮುಖಂಡರ ಶೋಷಣೆಗೆ ಒಳಗಾಗುತ್ತಿರುವ ಬೆಳೆಗಾರರಿಗೆ ರಕ್ಷಣೆ ನೀಡಬೇಕಾಗಿದೆ ಎಂದು ಕಿಸಾನ್ ಸಂಘದ ನೇತೃತ್ವದಲ್ಲಿ ತಾಲೂಕು ಅಧ್ಯಕ್ಷ ಕೊಲ್ಲಿರ ಧರ್ಮಜ ಉತ್ತಪ್ಪ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ನಾಯಕ ಮತ್ತು ಮುಖಂಡರ ಸೋಗಿನಲ್ಲಿ ಕಾರ್ಮಿಕರು ಮತು ದಲಿತರ ಮುಗ್ದ ಮನಸ್ಸುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ದುರ್ಘಟನೆಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವುದು ಕೊಡಗಿನ ಶಾಂತಿಯುತ ಮನಸ್ಥಿತಿಯನ್ನು ಕದಡಲು ಕಾರಣವಾಗುತ್ತಿದೆ. ಸುಳ್ಳು ದೂರುಗಳನ್ನು ದಾಖಲಿಸಿ ಮಾಲೀಕರ ಮೇಲೆ ದೌರ್ಜನ್ಯ ನಡೆಸುವ ಘಟನೆಗಳಿಗೆ ನ್ಯಾಯಯುತವಾಗಿ ಕಡಿವಾಣ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡು ನ್ಯಾಯಪರ ಕಾನೂನು ಅನುಷ್ಠಾನಗೊಳಿಸಬೇಕೆಂದು ಕಿಸಾನ್ ಸಂಘ ಪದಾಧಿಕಾರಿಗಳು ಒತ್ತಾಯಿಸಿದರು.

ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ ತಾಲೂಕು ಪೊಲೀಸ್ ಉಪಾಧೀಕ್ಷಕ ಜಯಕುಮಾರ್ ಮಾತನಾಡಿ ಜಾತಿನಿಂದನೆ, ದೌರ್ಜನ್ಯ ಕಾಯ್ದೆಯಡಿ ದೂರುಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವೃತ್ತನಿರೀಕ್ಷಕ ಜಯರಾಮ್, ಉಪನಿರೀಕ್ಷಕ ಸುಬ್ಬಯ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.

ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟಿರ ಪ್ರವೀಣ್, ಪ್ರಮುಖರಾದ ಲಾಲ ಭೀಮಯ್ಯ, ಗೋಪಿ ಚಿಣ್ಣಪ್ಪ, ದಿನು, ಕುಲ್ಲಚಂಡ ಚಿಣ್ಣಪ್ಪ, ಮದ್ರೀರ ಗಿರೀಶ್ ಸೇರಿದಂತೆ ನೂರಕ್ಕೂ ಹೆಚ್ಚು ಸಂಘದ ಪದಾಧಿಕಾರಿಗಳು, ತೋಟದ ಮಾಲೀಕರುಗಳು ಹಾಜರಿದ್ದರು.