ಸಿದ್ದಾಪುರ, ಮಾ. ೨೩: ಕಾವೇರಿ ನದಿ ದಡದಲ್ಲಿ ಮದ್ಯದ ಬಾಟಲಿ, ಊಟದ ತಟ್ಟೆ ಸೇರಿದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿದಿದ್ದು, ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕರಡಿಗೋಡು ಗ್ರಾಮದ ಬಸವೇಶ್ವರ ದೇವಾಲಯದ ಸಮೀಪದ ಕಾವೇರಿ ನದಿಯ ದಡದಲ್ಲಿ ಕಿಡಿಗೇಡಿಗಳು ತ್ಯಾಜ್ಯವನ್ನು ಎಸೆದಿದ್ದು, ಕೊಳೆತ ತ್ಯಾಜ್ಯ ನದಿ ಸೇರುತ್ತಿದೆ.
ರಸ್ತೆ ಬದಿಯಿಂದ ಕಸವನ್ನು ಎಸೆದಿದ್ದು, ಕಾವೇರಿ ನದಿಯ ದಡದಲ್ಲಿ ರಾಶಿಗಟ್ಟಲೆ ಕಸ ಬಿದ್ದಿದೆ. ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ನದಿ ದಡದಲ್ಲಿ ಹಾಕಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಎಂ.ಎ. ಕೃಷ್ಣ ಸಿದ್ದಾಪುರ ಗ್ರಾ.ಪಂ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸ್ಥಳೀಯರಾದ ಕುಕ್ಕನೂರು ಮೋಹನ್ ಮಾತನಾಡಿ, ಕಾವೇರಿ ನದಿಗೆ ತ್ಯಾಜ್ಯ ಎಸೆದಿರುವುದು ಖಂಡನೀಯ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾ.ಪA ಕ್ರಮ ಕೈಗೊಳ್ಳಲು ಒತ್ತಾಯ
ಜೀವನದಿ ಕಾವೇರಿಯನ್ನು ಕಲುಶಿತಗೊಳಿಸುವವರ ವಿರುದ್ಧ ಆಯಾ ಗ್ರಾ.ಪಂ ಕ್ರಮ ಕೈಗೊಳ್ಳಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಚಂದ್ರಮೋಹನ್ ಒತ್ತಾಯಿಸಿದ್ದಾರೆ. ನದಿಗೆ ತ್ಯಾಜ್ಯ ಹಾಕುವ ಸಂದರ್ಭ ದೂರುಗಳು ಬಂದಾಗ ಗ್ರಾ.ಪಂ ತನಿಖೆ ನಡೆಸಿ, ತಪ್ಪಿತಸ್ಥರಿಗೆ ದಂಡ ವಿಧಿಸಬೇಕು. ಹಾಗೂ ತ್ಯಾಜ್ಯಗಳನ್ನು ಅವರಿಂದಲೇ ತೆಗಿಸಬೇಕು ಎಂದು ಒತ್ತಾಯಿಸಿದ್ದಾರೆ.