ಮಡಿಕೇರಿ, ಮಾ. ೨೩: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಐದನೇ ವಾರ್ಷಿಕ ಮಹಾಸಭೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು.

ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆ, ಮುಂದಿನ ಯೋಜನೆಗಳ ಕುರಿತಾಗಿ ಚರ್ಚಿಸಲಾಯಿತು. ಅಧ್ಯಕ್ಷೆ ಕವಿತಾ ಅವರು ಮಾತನಾಡಿ, ಸದಸ್ಯತ್ವ ಹೆಚ್ಚಳ ಸೇರಿದಂತೆ ಕೊಡವ ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ಕೂಟ ಕೈಜೋಡಿಸುತ್ತಿದೆ ಎಂದರು. ಈ ಸಂದರ್ಭ ಹಾಲಿ ಆಡಳಿತ ಮಂಡಳಿಯನ್ನೇ ಮುಂದಿನ ಸಾಲಿಗೂ ಮುಂದುವರಿಸಲು ತೀರ್ಮಾನಿಸಲಾಯಿತು. ಬೊಪ್ಪಂಡ ಸರಳಾ ಪ್ರಾರ್ಥಿಸಿ, ಕೂಟದ ಕಾರ್ಯದರ್ಶಿ ಬೊಳ್ಳಜೀರ ಯಮುನಾ ಅಯ್ಯಪ್ಪ ಸ್ವಾಗತಿಸಿ ವರದಿ ನೀಡಿದರು. ಖಜಾಂಚಿ ಉಳ್ಳಿಯಡ ಸಚಿತಾ ಗಂಗಮ್ಮ ಲೆಕ್ಕಪತ್ರ ಮಂಡಿಸಿದರು. ಮುಕ್ಕಾಟಿರ ಅಂಜು ಸುಬ್ರಮಣಿ ವಂದಿಸಿದರು. ಆಡಳಿತ ಮಂಡಳಿ ಸದಸ್ಯರು ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.