ಮಡಿಕೇರಿ, ಮಾ. ೨೩: ನಗರದ ಗಣಪತಿ ಬೀದಿ ವಿಸ್ತರಣೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ನಗರಸಭೆ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.
ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಸತೀಶ ಅವರನ್ನು ಭೇಟಿಯಾದ ಪಕ್ಷದ ಪದಾಧಿಕಾರಿಗಳು ಗಣಪತಿ ಬೀದಿಯ ಅವ್ಯವಸ್ಥೆಯನ್ನು ವಿವರಿಸಿದರು. ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬಗತಿಯಲ್ಲಿ ಸಾಗುತ್ತಿದ್ದು, ಈ ಭಾಗದ ನಿವಾಸಿಗಳು ಹಾಗೂ ವರ್ತಕರು ಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಯನ್ನು ಡಾಂಬರೀಕರಣ ಅಥವಾ ಕಾಂಕ್ರೀಟಿಕರಣ ಮಾಡದೇ ಇರುವುದರಿಂದ ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಧೂಳುಮಯವಾಗಿದ್ದು, ಅನೇಕರು ರೋಗಕ್ಕೆ ತುತ್ತಾಗಿದ್ದಾರೆ. ನಗರಸಭೆಗೆ ಮನವಿ ಪತ್ರ ಸಲ್ಲಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಕೋರಿಕೊಂಡಿದ್ದರೂ ಯಾವುದೇ ಸ್ಪಂದನ ದೊರೆತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಎರಡು ತಿಂಗಳಿನಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಕಾಮಗಾರಿ ಅಪೂರ್ಣಗೊಂಡರೆ ಅನಾಹುತ ಎದುರಾಗಿ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದೆ. ಮುಂದಿನ ೭ ದಿನಗಳೊಳಗೆ ಕಾಮಗಾರಿಯನ್ನು ಚುರುಕುಗೊಳಿಸದಿದ್ದಲ್ಲಿ ಸಾರ್ವಜನಿಕರ ಬೆಂಬಲದೊAದಿಗೆ ನಗರಸಭೆಯ ಎದುರು ತಾ. ೨೯ ರಂದು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಕಲೀಲ್ ಬಾಷಾ, ನಗರ ಪ್ರಧಾನ ಕಾರ್ಯದರ್ಶಿ ಫಯಾಜ್, ಉಪಾಧ್ಯಕ್ಷ ಬೌತೀಸ್ ಡಿಸೋಜ ಹಾಗೂ ಖಜಾಂಚಿ ಅಜೀ಼ಜ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.
 
						