ಕಣಿವೆ, ಮಾ. ೨೨: ಗ್ರಾಮಸ್ಥರಾದ ನಾವುಗಳು ತಾತ ಮುತ್ತಾತನ ಕಾಲದಿಂದಲೂ ವಾಸ ಮಾಡ್ತಾ ಇದ್ದೇವೆ. ನಮಗೆ ಹಕ್ಕುಪತ್ರ ಕೊಡಿ.. ಇದು ತೊರೆನೂರು ಗ್ರಾಮದಲ್ಲಿ ಶನಿವಾರ ನಡೆದ ‘ಹಳ್ಳಿಯಡೆಗೆ ಅಧಿಕಾರಿಗಳ ನಡಿಗೆ’ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಕೇಳಿ ಬಂದ ಒಕ್ಕೊರಲ ಕೂಗು.

ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತೊರೆನೂರು ಗ್ರಾಮದ ಸರ್ವೆ ನಂಬರ್ ೧೮೦ರಲ್ಲಿನ ೧೬ ಎಕರೆಗೂ ಹೆಚ್ಚು ಜಾಗದಲ್ಲಿ ನಿವಾಸಿಗಳು ಮನೆ ಕಟ್ಟಿಕೊಂಡು ವಾಸವಿದ್ದೇವೆ. ಗ್ರಾಮದ ಭೂದಾಖಲೆಯ ನಮೂನೆ ಕಲಂ ನಂ ೯ರಲ್ಲಿ ಸರ್ಕಾರ ಎಂದು ಇರಬೇಕಾದ ಸ್ಥಳದಲ್ಲಿ ಗ್ರಾಮಸ್ಥರು ಎಂದು ಇದೆ. ಇದರಿಂದಾಗಿ ಗ್ರಾಮಸ್ಥರಾದ ನಮಗೆ ಬ್ಯಾಂಕುಗಳಲ್ಲಿ ಮನೆ ಕಟ್ಟಲು ಅಥವಾ ಶೈಕ್ಷಣಿಕ ಸಾಲ ಸೌಲಭ್ಯ ಹೊಂದಲು ಆರ್ಥಿಕ ಸಹಾಯ ದೊರಕುತ್ತಿಲ್ಲ. ಕೂಡಲೇ ನಮ್ಮ ಸಮಸ್ಯೆಗೆ ತಹಶೀಲ್ದಾರರು ಶಾಶ್ವತ ಪರಿಹಾರ ಒದಗಿಸಬೇಕು.

ಸರ್ಕಾರ ಅಥವಾ ಕೊಡಗು ಜಿಲ್ಲಾಧಿಕಾರಿಗಳು ಕಲಂ ನಂಬರ್ ೯ರಲ್ಲಿನ ಗ್ರಾಮಸ್ಥರು ಎಂಬುದನ್ನು ತೆಗೆದು ಸರ್ಕಾರ ಎಂದು ಮಾಡಿಕೊಡುವ ಮೂಲಕ ಗ್ರಾಮದ ಅನೇಕ ವರ್ಷಗಳ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ತೊರೆನೂರು ಗ್ರಾಮದ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೃಷ್ಣೇಗೌಡ, ಟಿ.ಬಿ. ಜಗದೀಶ್, ಹೆಚ್.ಬಿ. ಚಂದ್ರಪ್ಪ, ಟಿ.ಕೆ. ಪಾಂಡುರAಗ, ಟಿ.ವಿ. ಪ್ರಕಾಶ್ ಮೊದಲಾದವರು ಸಭೆಯಲ್ಲಿ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪ್ರಕಾಶ್, ಗ್ರಾಮದ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ತೊರೆನೂರು ಗ್ರಾಮದಲ್ಲಿ ಆರೋಗ್ಯ ಇಲಾಖೆಯ ದಾದಿಯರ ಸೇವೆ ಸರಿಯಾಗಿ ದೊರೆಯುತ್ತಿಲ್ಲ. ದಾದಿಯರು ಯಾರೆಂಬುದೇ ಗ್ರಾಮಸ್ಥರಿಗೆ ತಿಳಿದಿಲ್ಲ. ಗ್ರಾಮದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಕಟ್ಟಡದ ಕಾಮಗಾರಿ ನಿರ್ವಹಿಸಬೇಕು. ಈಗಾಗಲೇ ರೂ. ೧೦ ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಮೇಲು ಅಂತಸ್ತಿನ ಮೇಲೆ ನಿರ್ಮಿಸುತ್ತಿರುವ ಕಾಮಗಾರಿಯ ಬಗ್ಗೆ ಜಿ.ಪಂ. ಎಇಇ ವೀರೇಂದ್ರ ಅವರು ಗಮನಹರಿಸಬೇಕು. ಸಾರ್ವಜನಿಕರು ಈ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿದಾಗ ಅಧಿಕಾರಿಗಳು ಕರೆ ಸ್ವೀಕರಿಸಬೇಕು. ಕೇವಲ ಗುತ್ತಿಗೆದಾರರ ಕರೆಗೆ ಸೀಮಿತವಾಗಬಾರದು ಎಂದು ಗ್ರಾಮದ ಕೆ.ಎಸ್. ಕೃಷ್ಣೇಗೌಡ ಹೇಳಿದರು.

ಗ್ರಾಮದಲ್ಲಿನ ಕೆರೆಗಳು, ಪೈಸಾರಿ ಜಾಗಗಳು ಒತ್ತುವರಿಯಾಗಿದ್ದು ಅವುಗಳನ್ನು ತೆರವುಗೊಳಿಸಬೇಕು. ಹಾಗೆಯೇ ಅಂತರ್ಜಲ ಕಡಿಮೆಯಾಗಿರುವುದರಿಂದ ಕೆರೆಗಳ ಹೂಳೆತ್ತಿ ಅಂತರ್ಜಲ ಮಟ್ಟವನ್ನು ಸುಧಾರಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್ ಒತ್ತಾಯಿಸಿದರು.

ಅಳುವಾರ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ಕೊಡಗಿನ ಜನರಿಗೆ ನೀರಾವರಿ ಭೂಮಿಗೆ ಹರಿಸುವ ನೀರು ಸೇರಿದಂತೆ ಕುಡಿವ ನೀರಿಗೆ ಸಮಸ್ಯೆ ಇರುವಾಗ ನೆರೆಯ ಅರಕಲಗೂಡು ತಾಲೂಕಿನ ಗಡಿಗ್ರಾಮಗಳ ಮಂದಿಗೆ ನಮ್ಮ ಕಡೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದ ಚೆಸ್ಕಾಂ ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವರಾಜು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಎರಡೂ ವರ್ಷಗಳಲ್ಲಿ ಬಾಧಿಸಿದ ಕೊರೊನಾದಿಂದಾಗಿ ತೊರೆನೂರು ಭಾಗದಲ್ಲಿ ಮೃತಪಟ್ಟ ಮಂದಿಯ ಕುಟುಂಬ ಸದಸ್ಯರಿಗೆ ಸರ್ಕಾರದಿಂದ ನೀಡುವ ಪರಿಹಾರ ತಲುಪಿಲ್ಲ ಎಂದು ಗ್ರಾಮದ ಟಿ.ಬಿ. ಜಗದೀಶ್ ಹೇಳಿದರು.

ತೊರೆನೂರು ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಚೆಸ್ಕಾಂ ಸಿಬ್ಬಂದಿ ಲೇನ್ ಮೆನ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಗ್ರಾಮದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ .

ಜಮೀನುಗಳಲ್ಲಿ ಅಳವಡಿತ ಪಂಪ್‌ಸೆಟ್‌ಗಳ ವಿದ್ಯುತ್ ಸರಬರಾಜು ವ್ಯತ್ಯಯವಾದಾಗ ಎಷ್ಟು ಬಾರಿ ಹೇಳಿದರೂ ಸ್ಪಂದಿಸದ ಕಾರಣ ಖಾಸಗಿಯವರಿಂದ ದುಪ್ಪಟ್ಟು ಹಣ ಕೊಟ್ಟು ಸೇವೆ ಪಡೆಯಬೇಕಾಗಿದೆ ಈ ಬಗ್ಗೆ ಗಮನಿಸಿ ಎಂದು ಗ್ರಾಮದ ಟಿ.ವಿ. ಪ್ರಕಾಶ್ ಹೇಳಿದರು.

ಭೈರಪ್ಪನಗುಡಿ ತೊರೆನೂರು ಸಂಪರ್ಕ ರಸ್ತೆ ಕಿತ್ತು ನಿಂತಿದ್ದು, ವಾಹನ ಸವಾರರಿಗೆ ಅನಾನುಕೂಲವಾಗುತ್ತಿದೆ. ಜೊತೆಗೆ ರಸ್ತೆಯ ಎರಡೂ ಕಡೆಗಳಲ್ಲಿ ಬೆಳೆದಿರುವ ಕಾಡು ಗಿಡಗಳನ್ನು ತೆರವುಗೊಳಿಸಿ ಎಂದು ಗ್ರಾಮದ ಟಿ.ಕೆ. ಪಾಂಡುರAಗ ಒತ್ತಾಯಿಸಿದರು.

ಅಳುವಾರದ ಸರ್ಕಾರಿ ಶಾಲಾವರಣದಲ್ಲಿರುವ ಅರಳಿ ಕಟ್ಟೆ ಶಿಥಿಲಾವಸ್ಥೆಯಲ್ಲಿದ್ದು ಹಾವುಗಳು ಸೇರಿಕೊಂಡಿವೆ. ಆದ್ದರಿಂದ ಅದನ್ನು ಸುಸ್ಥಿತಿಗೊಳಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಿ ಎಂದು ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ಬಾಯಿ ಹೇಳಿದರೆ, ತೊರೆನೂರು ಜಿಎಂಪಿ ಶಾಲೆಯ ಸಭಾಂಗಣವನ್ನು ಮಳೆಗಾಲದೊಳಗೆ ಸರಿಪಡಿಸಿ ಎಂದು ಅಲ್ಲಿನ ಶಾಲಾ ಮುಖ್ಯ ಶಿಕ್ಷಕಿ ಕಾಮಾಕ್ಷಿ ಕೇಳಿಕೊಂಡರು.

ತೊರೆನೂರು ವ್ಯಾಪ್ತಿಯ ಸರ್ವೆ ನಂಬರ್ ೨೨ರಲ್ಲಿನ ೨ ಎಕರೆ ಪ್ರದೇಶದಲ್ಲಿನ ಗರಿಕೆಕಟ್ಟೆ ಕೆರೆ ಒಡೆದು ಹಾಳಾಗಿದೆ. ಅದರ ನೀರು ನಮ್ಮ ಕೃಷಿ ಭೂಮಿಯ ಮೇಲೆ ಹರಿಯುವ ಮುನ್ನ ಕೂಡಲೇ ಸರಿಪಡಿಸಿ ಎಂದು ನಿವೃತ್ತ ಆಯುರ್ವೇದ ಅಧಿಕಾರಿ ಸಿದ್ದಲಿಂಗಪ್ಪ ಒತ್ತಾಯಿಸಿದರು.

ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ತಹಶೀಲ್ದಾರ್ ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅವುಗಳನ್ನು ಸ್ಥಳದಲ್ಲೇ ಪರಿಹರಿಸಲು ಅಥವಾ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಹಿಡಿಯಲು ಸರ್ಕಾರ ರೂಪಿಸಿದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗ್ರಾಮಸ್ಥರ ಸಮಸ್ಯೆಗಳನ್ನು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಉಪತಹಶೀಲ್ದಾರ್ ಮಧು, ಕಂದಾಯ ಅಧಿಕಾರಿ ಸಂತೋಷ್, ಭೂಮಾಪನಾ ಇಲಾಖೆಯ ಅಧೀಕ್ಷಕ ಮಹೇಶ್, ಜಿ.ಪಂ. ಎಇಇ ವೀರೇಂದ್ರಕುಮಾರ್, ತಾ.ಪಂ. ಸಹಾಯಕ ನಿರ್ದೇಶಕ ರವೀಶ್, ಶಿಕ್ಷಣ ಇಲಾಖೆಯ ಹೇಮಂತಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಇದ್ದರು.

ಕೃಷಿ ಇಲಾಖೆ ಅಧಿಕಾರಿ ಅರುಣ, ತೋಟಗಾರಿಕೆ ಇಲಾಖೆಯ ಕಾವ್ಯ, ಕಾರ್ಮಿಕ ಇಲಾಖೆಯ ಲೀಲಾ, ಚೆಸ್ಕಾಂ ಇಂಜಿನಿಯರ್ ರಾಣಿ, ಗ್ರಾಮ ಲೆಕ್ಕಿಗರಾದ ಪೀರ್ ಮೊಹಮ್ಮದ್, ಗೌತಂ, ಗುರುದರ್ಶನ, ತೊರೆನೂರು ಗ್ರಾಮ ಪಂಚಾಯಿತಿ ಪಿಡಿಒ ವೀಣಾ ಮೊದಲಾದವರಿದ್ದರು.