ಕೂಡಿಗೆ/ ಹೆಬ್ಬಾಲೆ ಮಾ.೨೧ : ಉತ್ತರ ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲಕೊಪ್ಪಲು ಕಾಳಿಕಾಂಭ ಯುವಕ ಸಂಘದ ವತಿಯಿಂದ ಶ್ರೀ ಉಮಾಮಹೇಶ್ವರ ರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಥಮ ವರ್ಷದ ರಾಜ್ಯಮಟ್ಟದ ಹೊನಲುಬೆಳಕಿನ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಸುನೀಲ್ ಪ್ರಥಮ ಬಹುಮಾನ ಗಳಿಸಿಕೊಂಡರು.

ಕಾಳಿಕಾAಭ ಯುವಕ ಸಂಘದ ವತಿಯಿಂದ ಕಾವೇರಿ ನದಿ ದಂಡೆಯ ರೈತ ಚಂದ್ರಶೇಖರ್ ಅವರ ಹೊಲದಲ್ಲಿ ಹೊನಲುಬೆಳಕಿನ ಜೋಡಿ ಎತ್ತಿನಗಾಡಿ ಓಡಿಸುವ ಸ್ಪರ್ಧೆ ನಡೆಯಿತು. ರೋಮಾಂಚನಕಾರಿ ಹಾಗೂ ಸಾಹಸಮಯ ಕ್ರೀಡೆಯನ್ನು ನೋಡಲು ಶಿರಂಗಾಲ, ನಲ್ಲೂರು, ಮಣಜೂರು, ತೊರೆನೂರು, ಮೂಡಲಕೊಪ್ಪಲು ಗ್ರಾಮಗಳ ಸಾವಿರಾರು ಮಂದಿ ಬಂದಿದ್ದರು.

ಸ್ಪರ್ಧೆಯಲ್ಲಿ ೩೪ಕ್ಕೂ ಹೆಚ್ಚಿನ ಎತ್ತಿನಗಾಡಿ ಮಾಲೀಕರು ಪಾಲ್ಗೊಂಡಿದ್ದರು. ಓಟದಲ್ಲಿ ೧೫೦ ಮೀಟರ್ ದೂರ ನಿಗದಿಪಡಿಸಲಾಗಿತ್ತು. ಎತ್ತುಗಳು ಓಡುತ್ತಿದ್ದಂತೆ ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಹುರಿದುಂಬಿಸುತ್ತಿದ್ದರು. ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಸುನೀಲ್ ಪ್ರಥಮ ಸ್ಥಾನಗಳಿಸಿ ರೂ.೫೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು.

ದ್ವಿತೀಯ ಸ್ಥಾನಗಳಿಸಿದ ಹಾಸನ ಜಿಲ್ಲೆಯ ಹಳೇಬೀಡು ಶ್ರೀರಂಗ ರೂ.೪೦ ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನಗಳಿಸಿದ ಸಾಲಿಗ್ರಾಮದ ಲವಕುಶ ಅವರು ರೂ.೩೦ ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನಗಳಿಸಿದ ಮೈಸೂರಿನ ಪಾಲಹಳ್ಳಿ ರಾಮು ರೂ.೨೦ ಸಾವಿರ ನಗದು ಹಾಗೂ ಟ್ರೋಫಿ, ಐದನೇ ಸ್ಥಾನಗಳಿಸಿದ ಮಲ್ಲಿನಾಥಪುರದ ಕೃಷ್ಣೇಗೌಡ ರೂ.೧೦ ಸಾವಿರ ನಗದು ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆದುಕೊಂಡರು.

ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಎತ್ತಿನಗಾಡಿ ಓಡಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಇಂತಹ ಕ್ರೀಡಾಕೂಟಗಳು ಗ್ರಾಮದಲ್ಲಿ ಸಾಮರಸ್ಯವನ್ನು ಬೆಳೆಸಲು ಸಹಕಾರಿಯಾಗಿದೆ; ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.

ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಎಚ್.ಆರ್.ಶ್ರೀನಿವಾಸ್, ಶಿರಂಗಾಲ ಗ್ರಾ.ಪಂ.ಮಾಜಿ ಅಧ್ಯಕ್ಷೆ ಭಾಗೀರಥಿ,ಮಾಜಿ ಅಧ್ಯಕ್ಷ ಎನ್.ಎಸ್.ರಮೇಶ್, ಸದಸ್ಯರಾದ ಸರಿತಾ, ಪ್ರದೀಪ್, ಶ್ರೀಕಾಂತ್, ಲತಾಬಾಯಿ, ಲಕ್ಷö್ಮಮ್ಮ, ಗೀತಾ, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಸಿ.ರುದ್ರಪ್ಪ, ಕಾರ್ಯದರ್ಶಿ ಎಸ್.ಎಸ್.ಮಹೇಶ್, ಕಾಳಿಕಾಂಭ ಯುವಕ ಸಂಘದ ಅಧ್ಯಕ್ಷ ಎಂ.ಎಸ್.ಚನ್ನರಾಜು, ಉಪಾಧ್ಯಕ್ಷ ಮನುಕುಮಾರ್, ಕಾರ್ಯದರ್ಶಿ ನಟರಾಜು ಹಾಗೂ ಖಜಾಂಜಿ ಕುಮಾರ್, ಮುಖಂಡರಾದ ಎಂ.ಎಸ್. ಗಣೇಶ್, ಎಸ್.ಎಸ್.ಚಂದ್ರಶೇಖರ್, ಚೇತನ್, ಸಿ.ಎನ್.ಲೋಕೇಶ್ ಇದ್ದರು.