ಸೋಮವಾರಪೇಟೆ, ಮಾ. ೨೨: ಸೋಮವಾರಪೇಟೆ-ಬಾಣಾವರ ಮಾರ್ಗ ಮಧ್ಯೆ ಇರುವ ಬಸವಣ್ಣ ಕಲ್ಲು ಬಳಿ ಬೈಕ್ನಲ್ಲಿ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಧಾಳಿ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದ್ದು. ಅದೃಷ್ಟವಶಾತ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿದ್ಯುತ್ ಇಲಾಖೆಯ ವತಿಯಿಂದ ನಡೆಯುತ್ತಿರುವ ಟ್ರಾನ್ಸ್ಫಾರ್ಮರ್, ಕಂಬಗಳ ಅಳವಡಿಕೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶಿವಮೊಗ್ಗ ಮೂಲದ ಮಂಜುನಾಥ್ ಹಾಗೂ ಸಹ ಕಾರ್ಮಿಕನೋರ್ವ ನಿನ್ನೆ ರಾತ್ರಿ ೯ ಗಂಟೆ ಸುಮಾರಿಗೆ ಅಬ್ಬೂರುಕಟ್ಟೆಯಿಂದ ಸಂಗಯ್ಯನಪುರಕ್ಕೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ.
ರಾತ್ರಿ ಕೆಲಸ ಮುಗಿಸಿ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭ ಬಸವಣ್ಣ ಕಲ್ಲು ಸಮೀಪ ಏಕಾಏಕಿ ಕಾಡಾನೆ ಧಾಳಿ ನಡೆಸಿದೆ. ಈ ಸಂದರ್ಭ ಕೆಳಬಿದ್ದ ಮಂಜುನಾಥ್ನ ತಲೆ, ಸೊಂಟ ಹಾಗೂ ಕಾಲಿಗೆ ಗಾಯವಾಗಿದ್ದು, ತಕ್ಷಣ ಕುಶಾಲನಗರಕ್ಕೆ ಸಾಗಿಸಿ ಅಲ್ಲಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ದಾರಿಹೋಕರ ಮೇಲೆ ಆಗಾಗ್ಗೆ ಧಾಳಿಗಳು ನಡೆಯುತ್ತಲೇ ಇವೆ. ಇದರೊಂದಿಗೆ ಕೃಷಿ ಫಸಲನ್ನೂ ನಷ್ಟಗೊಳಿಸುತ್ತಿವೆ. ಕಾಡಾನೆಗಳ ಉಪಟಳಕ್ಕೆ ಪರಿಹಾರ ಮಾರ್ಗ ಕಂಡುಕೊಳ್ಳಬೇಕೆAದು ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.