ಮಡಿಕೇರಿ, ಮಾ. ೨೨: ಕೊಡಗು ಕ್ರೀಡಾ ಜಿಲ್ಲೆ ಎಂದು ಹೆಸರಾಗಿದ್ದು, ಇಲ್ಲಿ ವಿಶೇಷವಾಗಿ ಕ್ರೀಡಾ ವಿಶ್ವವಿದ್ಯಾನಿಲಯ ಪ್ರಾರಂಭಿಸಬೇಕು ಎಂಬ ಬೇಡಿಕೆಗೆ ತಿಲಾಂಜಲಿ ಇಟ್ಟಂತಾಗಿದೆ. ಬಹುತೇಕ ಈ ಕ್ರೀಡಾ ವಿವಿಯ ಕನಸ್ಸು ಇದೀಗ ಕೈಜಾರಿದಂತಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ೧೦೦ ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ರಾಜ್ಯದ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಅವರು ವಿಧಾನ ಪರಿಷತ್ ಕಲಾಪದಲ್ಲಿ ಮಾಹಿತಿ ನೀಡಿದ್ದಾರೆ.

ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಕೆ. ಗೋವಿಂದರಾಜು ಅವರು ಪ್ರಸ್ತಾಪಿಸಿದ ವಿಷಯದ ಮೇಲಿನ ಚರ್ಚೆಯ ಸಂದರ್ಭ ಅವರು ಯಲಹಂಕದಲ್ಲಿ ಕ್ರೀಡಾ ವಿವಿಗೆ ೧೦೦ ಎಕರೆ ಜಾಗ ಗುರುತಿಸಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

ಕೊಡಗಿನಲ್ಲಿ ಕ್ರೀಡಾ ವಿವಿ ಪ್ರಾರಂಭಿಸಬೇಕೆAಬ ಕುರಿತಾಗಿ ಜಿಲ್ಲೆಯ ಶಾಸಕರುಗಳು ಸೇರಿದಂತೆ ಹಲವು ಸಂಘ-ಸAಸ್ಥೆಗಳು, ಕ್ರೀಡಾಭಿಮಾನಿಗಳು ಸರಕಾರಕ್ಕೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ಕ್ರೀಡಾ ಸಚಿವರ ಈ ಮಾಹಿತಿಯಿಂದಾಗಿ ಕ್ರೀಡಾ ವಿವಿ ಸ್ಥಾಪನೆ ಕೊಡಗಿನಿಂದ ಕೈ ಜಾರಿದಂತಾಗಿರುವುದು ಸ್ಪಷ್ಟವಾಗಿದೆ.

-ಶಶಿ