ವೀರಾಜಪೇಟೆ, ಮಾ. ೨೨: ಕೂಲಿ ಕೆಲಸಕ್ಕೆಂದು ಬಂದ ವ್ಯಕ್ತಿಯೊರ್ವ ಕೆರೆಯೊಂದರಲ್ಲಿ ಮುಳುಗಿ ಮೃತಪಟ್ಟ ಘಟನೆ ವೀರಾಜಪೇಟೆ ಕಣ್ಣಂಗಾಲ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಅಳಲೂರು ಗ್ರಾಮದ ನಿವಾಸಿ ಮತ್ತು ಕಣ್ಣಂಗಾಲ ಗ್ರಾಮದ ರವಿ ಎಂಬವವರ ಲೈನ್ ಮನೆಯಲ್ಲಿ ವಾಸವಿದ್ದ ಸುಬ್ರಮಣಿ (ಅಣ್ಣಯ್ಯ-೩೫) ಕೆರೆಯಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿ.
ಮೃತನಾದ ಸುಬ್ರಮಣಿ ಕಣ್ಣಂಗಾಲ ಗ್ರಾಮದ ರವಿ ಎಂಬವರ ತೋಟದ ಕೆಲಸಕ್ಕೆ ಸುಮಾರು ೧೫ ವರ್ಷಗಳಿಂದ ಆಗಮಿಸುತಿದ್ದ ಎನ್ನಲಾಗಿದೆ. ತೋಟಕ್ಕೆ ನೀರು ಹಾಯಿಸುವ ಸಮಯಕ್ಕೆ ಬಂದು ಮೂರು ದಿನ ಕಾಲ ತಂಗಿ ನಂತರದಲ್ಲಿ ಮನೆಗೆ ಹಿಂದುರುಗುತಿದ್ದ. ತಾ. ೨೧ ರಂದು ಕಣ್ಣಂಗಾಲ ರವಿ ಅವರ ಕುಟುಂಬಸ್ಥರ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.
ರವಿ ಅವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದಾರೆ. ಕೆರೆಯಲ್ಲಿದ್ದ ಮೃತದೇಹ ಹೊರ ತೆಗೆದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಪತ್ನಿ ಗೌರಮ್ಮ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಇಂದು ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಕುಟುಂಬಸ್ಥರಿಗೆ ಶರೀರವನ್ನು ಹಸ್ತಾಂತರ ಮಾಡಲಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿಷ ಸೇವಿಸಿ ಮಹಿಳೆ ಸಾವು