ಗೋಣಿಕೊಪ್ಪ ವರದಿ, ಮಾ. ೨೦: ಕ್ರೌಡ್ ಫಂಡಿAಗ್ ಎಂಬ ವಿನೂತನ ಚಿಂತನೆಯಲ್ಲಿ ಸಾರ್ವಜನಿಕರಿಂದ ಧನಸಹಾಯ ಪಡೆದು ನಿರ್ಮಿಸಿರುವ ಡ್ರೀಮ್ ಇಲೆವೆನ್ ಕೊಡವ ಸಿನಿಮಾವನ್ನು ಬಿಟ್ಟಂಗಾಲ ಗ್ರಾಮದ ಭದ್ರಕಾಳಿ ದೇವಸ್ಥಾನ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು.
ಒಂದು ಗಂಟೆ ಅವಧಿಯಲ್ಲಿ ಸಾಕಷ್ಟು ಮಾಹಿತಿ, ಸಂದೇಶದ ಮೂಲಕ ನಿರ್ಮಿಸಿರುವ ಚಿತ್ರ ತಂಡಕ್ಕೆ ಹಿರಿಯ ಕಲಾವಿದರು ಪ್ರಶಂಸೆ ವ್ಯಕ್ತಪಡಿಸಿ, ಮತ್ತಷ್ಟು ಸಿನಿಮಾ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಕಲಾವಿದ ವಾಂಚೀರ ನಾಣಯ್ಯ ಮಾತನಾಡಿ, ತಾಂತ್ರಿಕವಾಗಿ ಉತ್ತಮ ಗುಣಮಟ್ಟದಿಂದ ನಿರ್ಮಿಸಲಾಗಿದೆ. ಯುವ ಸಮೂಹದ ಪ್ರಯತ್ನ ಮತ್ತಷ್ಟು ಹೆಚ್ಚಾಗಬೇಕು. ಕಲಾವಿದರಿಗೆ ಪ್ರೋತ್ಸಾಹ ದೊರೆಯುವುದರೊಂದಿಗೆ ಕೊಡವ ಭಾಷೆ ಪೋಷಣೆಗೂ ಸಹಕಾರಿ ಎಂದರು.
ಕಲಾವಿದೆ ತಾತಂಡ ಪ್ರಭಾ ನಾಣಯ್ಯ ಮಾತನಾಡಿ, ಕಥೆ, ಹಾಡು ಉತ್ತಮವಾಗಿ ಮೂಡಿ ಬಂದಿದೆ. ಕಿರಿಯ ಕಲಾವಿದರ ನಟನೆ ಕೂಡ ಮೆಚ್ಚುವಂತದ್ದು ಎಂದು ಶ್ಲಾಘಿಸಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಯುವ ಚಿತ್ರ ತಂಡದಿAದ ಹೊರ ಬಂದಿರುವ ಕಥೆ ಯುವ ಸಮೂಹಕ್ಕೆ ಮಾದರಿಯಾಗಿದ್ದು, ನಮ್ಮ ಮೂಲ ಸ್ಥಾನಕ್ಕೆ ನೀಡಬೇಕಾದ ಕಾಳಜಿಯನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ.
ಕೊಡಗಿನ ಮೂಲ ರಕ್ಷಣೆಗೆ ಸಿನಿಮಾ ಕಥೆ ಕೂಡ ದಾಖಲೆಯಾಗುವಂತೆ ಹೆಚ್ಚು ಚಿತ್ರ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದರು.
ಕಲಾವಿದ ಮಾಚೇಟೀರ ಜೆನಿತ್ ಅಯ್ಯಪ್ಪ ಮಾತನಾಡಿ, ಯುವ ಸಮೂಹ ಸ್ಥಳಿಯವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಚಿತ್ರ ನಿರ್ಮಿಸಿರುವುದು ಮೆಚ್ಚುವ ವಿಚಾರ. ಮತ್ತಷ್ಟು ಚಿತ್ರ ನಿರ್ಮಿಸಲು ಮುಂದಾಗಬೇಕಿದೆ ಎಂದರು.
ಚಿತ್ರದ ಸಹಾಯಕ ನಿರ್ದೇಶಕ ಬಿದ್ದಂಡ ಉತ್ತಮ್ ಪೊನ್ನಪ್ಪ ಮಾತನಾಡಿ, ೩.೫ ಲಕ್ಷ ರೂ. ಹಣದಲ್ಲಿ ಜನರ ಸಹಕಾರದಿಂದ ಚಿತ್ರ ನಿರ್ಮಿಸಲಾಗಿದ್ದು, ಅಭಿಮಾನಿಗಳ ಪ್ರೋತ್ಸಾಹ ಬೇಕು. ದಿನಕ್ಕೆ ಮೂರು ಪ್ರದರ್ಶನ ನೀಡಲು ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೃಷಿಕ ಸಮಾಜ ಅಧ್ಯಕ್ಷ ಮಾಚೆಟೀರ ಚೋಟು ಕಾವೇರಪ್ಪ ಕಲಾವಿದರಾದ ಬಾಳೇಯಡ ಪ್ರತೀಶ್ ಪೂವಯ್ಯ, ಆಚೆಯಡ ಗಗನ್ ಗಣಪತಿ, ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.
ಕ್ರೌಡ್ ಫಂಡಿAಗ್ : ಕಮರ್ಷಿಯಲ್ ಚಿಂತನೆಯಲ್ಲಿ ಸಿನಿಮಾ ನಿರ್ಮಿಸಲು ಕೊಡಗು ಜಿಲ್ಲೆಯಲ್ಲಿ ನಿರ್ಮಾಪಕರು ಆಸಕ್ತಿ ತೋರುತ್ತಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರಿಂದ ಸಹಾಯ ಪಡೆದು, ಕಲಾವಿದರು ಕೂಡ ಹಣ ಹೊಂದಿಸಿ ಚಿತ್ರ ನಿರ್ಮಿಸಲಾಗಿದೆ. ವಿನೂತನ ಪ್ರಯತ್ನ ಫಲ ಕಂಡಿದೆ. ಸಿನಿಮಾ ನಿರ್ಮಾಣದ ಹಂತ, ಮದ್ಯಂತರ ಅವಧಿ, ಪೂರ್ಣ ಪ್ರಮಾಣದ ನಿರ್ಮಾಣ ಮುಗಿಯುವ ಹಂತಕ್ಕೆ ಸಾಕಷ್ಟು ನಿರ್ಮಾಪಕರು ಬದಲಾಗುತ್ತಾರೆ. ಆರ್ಥಿಕ ಸ್ಥಿತಿಗತಿ ಇದಕ್ಕೆ ಮೂಲ ಕಾರಣವಾಗಿದ್ದು, ಸಾರ್ವಜನಿಕ ವಂತಿಗೆ ಮೂಲಕ ಚಿತ್ರ ನಿರ್ಮಿಸಿರುವುದು ವಿಶೇಷವಾಗಿದೆ.
ಕಥೆ, ಚಿತ್ರಕಥೆ ನಿರ್ದೇಶಕರಾಗಿ ಮಾಚೇಟ್ಟೀರ ವಿಕಾಸ್ ಬೋಪಣ್ಣ, ಸಹಾಯಕ ನಿರ್ದೇಶಕರಾಗಿ ಬಿದ್ದಂಡ ಉತ್ತಮ್ ಪೊನ್ನಪ್ಪ, ಸಂಭಾಷಣೆ ಅಪೂರ್ವ ಬೋಪಣ್ಣ, ಸಿನಿಮಾಟೋಗ್ರಫಿ ಚಂದ್ರಶೇಖರ್. ನಟರಾಗಿ ಸಣ್ಣುವಂಡ ರಕ್ಷಕ್ ಮೊಣ್ಣಪ್ಪ, ನಟಿ ಪಾತ್ರದಲ್ಲಿ ಅಪ್ಪೇಂಗಡ ಜಯ್ಲಿನ್ ಗಣಪತಿ ಸೇರಿದಂತೆ ಸುಮಾರು ೪೦ ಕಲಾವಿದರು ನಟಿಸಿದ್ದಾರೆ. ಮಧ್ಯಮ ವರ್ಗದ ಯುವಕ ಸಮಾಜದಲ್ಲಿ ಒತ್ತಡ ಅನುಭವಿಸಿ ಕನಸು ನನಸು ಮಾಡಿಕೊಳ್ಳಲು ಕಂಡುಕೊಳ್ಳುವ ಸುಲಭ ಮಾರ್ಗದ ಕಥೆಯಾಗಿದ್ದು, ಇರುವ ಉದ್ಯೋಗ ಬಿಟ್ಟು, ಕೈಗೆ ಸಿಗದ ರೀತಿಯಲ್ಲಿ ಲಾಟರಿಯಂತಹ ಚಟದ ಮೂಲಕ ಹಣ ಹೊಂದಿಸುವ ಪ್ರಯತ್ನ ನಡೆಸುವ ಬಗ್ಗೆ ಕಥೆ ಇದಾಗಿದೆ. ಬದುಕು ಸಾಗಿಸಲು ಯಾವ ಮಾರ್ಗ ಸೂಕ್ತ ಎಂಬುವುದನ್ನು ಅರಿತುಕೊಳ್ಳುವ ಪ್ರಯತ್ನ ನಡೆಸಲಾಗಿದೆ.
ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿದ್ದ ನಾಯಕ ಸಣ್ಣುವಂಡ ರಕ್ಷಕ್ ಮೊಣ್ಣಪ್ಪ, ನಾಯಕಿ ಅಪ್ಪೇಂಗಡ ಜೈಲಿನ್ ಗಣಪತಿ, ಮಾಚೇಟ್ಟಿರ ಪಟ್ಟು ಚೋಂದಮ್ಮ, ಪಟ್ಟಡ ಧನುರಂಜನ್, ತಾತಂಡ ಮಿನ್ನು ನವೀನ್, ಬಿದ್ದಂಡ ಉತ್ತಮ್ ಪೊನ್ನಪ್ಪ, ಬಲ್ಯಂಡ ವರ್ಷ, ಮಾಚೇಟೀರ ಸುನಿಲ್ ಕುಟ್ಟಪ್ಪ, ಮಾಚೇಟೀರ ವಿಕ್ಕಿ ಚೆಂಗಪ್ಪ, ಚಂದುರ ಸನ್ನು, ಚೇಂದAಡ ಪೊನ್ನಣ್ಣ, ಚೇಂದAಡ ರೋಶನ್ ಉಪಸ್ಥಿತರಿದ್ದರು