ಸೋಮವಾರಪೇಟೆ,ಮಾ.೨೧: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿನ ಬೆಳೆಗಾರರು ಪ್ರಸ್ತುತ ಹೂ ಮಳೆಗಾಗಿ ವರುಣನನ್ನು ಪ್ರಾರ್ಥಿಸುತ್ತಿದ್ದಾರೆ.
ಈಗಾಗಲೇ ಬಿಸಿಲಿನ ಝಳಕ್ಕೆ ಕಾಫಿ ತೋಟಗಳು ಒಣಗುತ್ತಿದ್ದು, ಕೆಲವೆಡೆ ಕಾಫಿ ಗಿಡಗಳು ಸೊರಗಿವೆ. ಕಳೆದ ವರ್ಷ ಫೆಬ್ರವರಿ ಎರಡನೇ ವಾರದಲ್ಲಿ ಅಲ್ಪ ಪ್ರಮಾಣದಲ್ಲಿ ಹೂಮಳೆ ಸುರಿದಿತ್ತು. ಆದರೆ ಬ್ಯಾಕಿಂಗ್ ಮಳೆ ಬೀಳದ ಕಾರಣ ಬಹುತೇಕ ಬೆಳೆಗಾರರು ಫಸಲು ನಷ್ಟ ಅನುಭವಿಸುವಂತಾಗಿತ್ತು. ಕೆರೆ, ಬೋರ್ವೆಲ್, ಹೊಳೆಗಳಲ್ಲಿ ನೀರಿನ ಸೌಲಭ್ಯವಿದ್ದವರು ಪಂಪ್ಸೆಟ್ಗಳ ಮೂಲಕ ನೀರನ್ನು ಹಾಯಿಸಿ ಫಸಲು ಉಳಿಸಿಕೊಳ್ಳುವ ಪ್ರಯತ್ನ ಮಾಡಿ ಯಶ ಕಂಡಿದ್ದರು.
ಈ ಬಾರಿ ಮಾರ್ಚ್ ಅಂತ್ಯವಾಗುತ್ತಾ ಬಂದರೂ ಬಹುತೇಕ ಕಡೆಗಳಲ್ಲಿ ಮಳೆ ಬಿದ್ದಿಲ್ಲ. ತಾಲೂಕಿನ ಶಾಂತಳ್ಳಿ, ಮಾದಾಪುರ, ಗೌಡಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಗಣಗೂರು, ಐಗೂರು, ಹಾನಗಲ್ಲು, ತೋಳೂರುಶೆಟ್ಟಳ್ಳಿ, ತಾಕೇರಿ, ಕಿರಗಂದೂರು, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿನ ಬೆಳೆಗಾರರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕಳೆದ ಡಿಸೆಂಬರ್, ಜನವರಿಯಲ್ಲಿ ಕಾಫಿ ಕೊಯ್ಲಿನ ಸಂದರ್ಭ ಅಕಾಲಿಕ ಮಳೆ ಸುರಿದು ಹಣ್ಣಾದ ಕಾಫಿ ಮಣ್ಣು ಸೇರಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಪ್ರಸಕ್ತ ಕಾಫಿಗೆ ಉತ್ತಮ ಬೆಲೆ ಇದ್ದು, ಉಳಿಸಿಕೊಂಡ ಫಸಲಿನಲ್ಲಿ ಉತ್ತಮ ಬೆಲೆ ಲಭಿಸಿದ ಹಿನ್ನೆಲೆ ಒಂದಷ್ಟು ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.
ಈ ಬಾರಿ ವಾಡಿಕೆಯಂತೆ ಹೂಮಳೆ ಬೀಳದ ಹಿನ್ನೆಲೆಯಲ್ಲಿ ಮುಂದಿನ ಸಾಲಿನ ಫಸಲಿನ ಮೇಲಿನ ದುಷ್ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವಂತಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೨೮,೫೪೦ ಹೆ.ನಲ್ಲಿ ಕಾಫಿ ಬೆಳೆಯುತ್ತಿದ್ದು, ೨೨,೯೪೦ಹೆ.ನಲ್ಲಿ ಅರೇಬಿಕಾ, ೫,೬೦೦ಹೆ.ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ. ಅರೇಬಿಕಾ ಕಾಫಿಗೆ ಸರಿಯಾದ ಸಮಯಕ್ಕೆ ನೀರು ಸಿಗದಿದ್ದರೆ, ಫಸಲು ಕೈ ಸೇರುವುದಿಲ್ಲ. ಹೀಗಾಗಿ ಬೆಳೆಗಾರರು ತಲೆಕೆಡಿಸಿಕೊಳ್ಳು ವಂತಾಗಿದೆ.
ತಾಲೂಕಿನಲ್ಲಿ ನಾಲ್ಕು ವಿಭಾಗಗ ಳಿದ್ದು, ಸೋಮವಾರಪೇಟೆ ಯಲ್ಲಿ ೬,೯೦೦ ಹೆಕ್ಟೇರ್ನಲ್ಲಿ ಅರೇಬಿಕಾ, ೪೦೦ ಹೆ.ನಲ್ಲಿ ರೋಬಸ್ಟಾ ಸೇರಿದಂತೆ ೭,೩೦೦ ಹೆ.ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಶನಿವಾರಸಂತೆ ಯಲ್ಲಿ ೬,೭೪೦ಹೆ. ನಲ್ಲಿ ಅರೇಬಿಕಾ, ೨೭೦ಹೆ.ನಲ್ಲಿ ರೋಬಸ್ಟಾ ಸೇರಿದಂತೆ ೭,೦೧೦ ಹೆ. ಕಾಫಿ ಬೆಳೆಯಲಾಗಿದೆ. ಸುಂಟಿಕೊಪ್ಪದಲ್ಲಿ ೬,೬೬೦ ಹೆ.ನಲ್ಲಿ ಅರೇಬಿಕಾ ಮತ್ತು ೩,೮೨೦ಹೆ. ರೋಬಸ್ಟಾ, ಒಟ್ಟು ೧೦,೪೮೦ ಹೆ., ಮಾದಾಪುರದಲ್ಲಿ ೨,೬೦೦ಹೆ. ಅರೇಬಿಕಾ ಮತ್ತು ೧೨೦೦ಹೆ. ರೋಬಸ್ಟಾ, ಸೇರಿದಂತೆ ೩,೮೦೦ ಹೆಕ್ಟೇರ್ನಲ್ಲಿ ಕಾಫಿ ಬೆಳೆಯಲಾಗುತ್ತಿದೆ.
ಕಳೆದ ೧೦ ವರ್ಷಗಳಿಂದಲೂ ಅಕಾಲಿಕ ಮಳೆ, ಪ್ರಕೃತಿ ವಿಕೋಪದಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ಹೆಚ್ಚಾದ ಉತ್ಪಾದನಾ ವೆಚ್ಚ, ದುಪ್ಪಟ್ಟು ಕೂಲಿ, ಕಾರ್ಮಿಕರ ಕೊರತೆ, ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ತೋಟಗಳನ್ನು ಪಾಳುಬಿಡುವ ಪರಿಸ್ಥಿತಿ ಒದಗಿದೆ. ಈ ನಡುವೆ ಬೋರ್ವೆಲ್ಗಳಿಂದ ತೋಟಕ್ಕೆ ನೀರು ಹಾಯಿಸಲಾಗುತ್ತಿದ್ದು, ವಿದ್ಯುತ್ ಇಲಾಖೆ ಇಂತಹ ಕ್ಲಿಷ್ಟಕರ ಸಂದರ್ಭದಲ್ಲೂ ವಿದ್ಯುತ್ ಕಡಿತಕ್ಕೆ ಮುಂದಾಗುತ್ತಿದೆ ಎಂದು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಲಿಂಗೇರಿ ರಾಜೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಚೀಲ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ಉತ್ಪಾದನೆಗೆ ೫ ಸಾವಿರ ರೂ. ಖರ್ಚಾಗುತ್ತದೆ. ಪ್ರಸಕ್ತ ವರ್ಷ ೫೦ ಕೆ.ಜಿ. ತೂಕದ ಅರೇಬಿಕ ಪಾರ್ಚ್ಮೆಂಟ್ಗೆ ೧೫,೫೦೦ ರೂ., ಸಿಕ್ಕಿದೆ. ಉತ್ಪಾದನಾ ವೆಚ್ಚ ಅಧಿಕವಾಗಿರುವುದರಿಂದ ಕಾಫಿ ಚೀಲವೊಂದಕ್ಕೆ ಪ್ರತಿ ವರ್ಷ ೧೮ ಸಾವಿರ ರೂ. ಬೆಲೆ ಸಿಕ್ಕರೆ ಮಾತ್ರ ಬೆಳೆಗಾರ ಸುಧಾರಿಸಿಕೊಳ್ಳಬಹುದು. ಪ್ರತಿ ವರ್ಷ ಉತ್ತಮ ಬೆಲೆ ಸಿಗುವ ಬಗ್ಗೆ ಖಾತ್ರಿ ಇಲ್ಲ. ಕಾಫಿ ತೋಟಗಳು ಉಳಿಯಬೇಕಾದರೆ ಕಾಫಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಕೊಡಬೇಕು. ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಒತ್ತಾಯಿಸಿದ್ದಾರೆ.
ಕೊಡಗಿನಲ್ಲಿ ರೈತರೆ ಕಾಫಿ ಬೆಳೆಯುತ್ತಿದ್ದು, ೧೦ಎಚ್.ಪಿ. ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿದರೆ ಬೆಳೆಗಾರರು ಸಂಕಷ್ಟದಿAದ ಸ್ವಲ್ಪ ಮಟ್ಟಿಗೆ ಪಾರಾಗಲಿದ್ದಾರೆ. ಉತ್ಪಾದನೆಯೂ ಹೆಚ್ಚಾಗಲಿದೆ. ಅನಾವೃಷ್ಟಿಯ ಸಂದರ್ಭ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಅಭಿಪ್ರಾಯಿಸಿದ್ದಾರೆ.
ಕೆರೆ, ಬೋರ್ವೆಲ್ ಇರುವವರು ಸ್ಪಿçಂಕ್ಲರ್ ಬಳಸಿ ತಮ್ಮ ತೋಟಗಳಿಗೆ ನೀರು ಹಾಯಿಸುತ್ತಿದ್ದಾರೆ. ತಡವಾಗಿ ಮಳೆ ಬಿದ್ದರೆ ಪ್ರಯೋಜನ ಇಲ್ಲದಂತಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ಹೂಮಳೆ ಬಿದ್ದು ಬ್ಲಾಸಂ ನಂತರ ಬ್ಯಾಕಿಂಗ್ ಮಳೆ ಬಿದ್ದರೆ ಫಸಲು ನಿರೀಕ್ಷಿಸಬಹುದು. ಈ ಹಿನ್ನೆಲೆ ಬೇಸಿಗೆ ಪೂರ್ವ ಹಿಂಗಾರು ಮಳೆಯನ್ನೇ ನೆಚ್ಚಿಕೊಂಡು ಕಾಫಿ ಕೃಷಿ ಮಾಡುತ್ತಿರುವ ಬೆಳೆಗಾರರು ಮಳೆಗಾಗಿ ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ.