ಕಣಿವೆ, ಮಾ ೨೦: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ಕೃಷಿಕರಿಗೆ ಸೇರಿದ ಹುಣಸೆ ಮರದಲ್ಲಿನ ಫಸಲು ತಿಂದು ನಷ್ಟ ಮಾಡುತ್ತಿರುವ ಬಗ್ಗೆ ಕೃಷಿಕರು ದೂರಿದ್ದಾರೆ.
ಗ್ರಾಮದ ಕಾವೇರಿ ನದಿ ದಂಡೆಯ ಜಮೀನಿನಲ್ಲಿನ ಹುಣಸೆ ಮರಕ್ಕೆ ದಾಳಿ ಇಡುವ ನೂರಾರು ಸಂಖ್ಯೆಯ ಮಂಗಗಳು ಇಡೀ ಮರದಲ್ಲಿ ಬಿಟ್ಟಿದ್ದ ಹುಣಸೆ ಹಣ್ಣು ತಿಂದು ನಷ್ಟ ಮಾಡುತ್ತಿವೆ ಎಂದು ನಿವೃತ್ತ ಕಂದಾಯಾಧಿಕಾರಿಯೂ ಆದ ಕೃಷಿಕ ಪದ್ಮಕುಮಾರ್ ದೂರಿದ್ದಾರೆ.
ಅಲ್ಲದೇ ಗ್ರಾಮದೊಳಗೂ ಬೀಡು ಬಿಟ್ಟಿರುವ ಮಂಗಗಳು ಮನೆಯ ಒಳಾವರಣಕ್ಕೆ ನುಗ್ಗಿ ವಸ್ತುಗಳನ್ನು ಹೊತ್ತೊಯ್ಯುತ್ತಿವೆ.
ಗ್ರಾಮದ ಸತೀಶ ಎಂಬವರ ಮನೆಯೊಳಗೆ ನುಗ್ಗಿದ ಮಂಗವೊAದು ಗೋಡೆಯಲ್ಲಿ ಅಳವಡಿಸಿದ್ದ ಕನ್ನಡಿಯನ್ನು ಹೊತ್ತೊಯ್ದು ಮರವೇರಿ ಕನ್ನಡಿಯಲ್ಲಿ ತನ್ನ ಮುಖವನ್ನು ತಾನು ನೋಡಿಕೊಂಡ ಘಟನೆಯೂ ನಡೆದಿದೆ. ಹಾಗೆಯೇ ಮನೆಯ ತಾರಸಿ ಮೇಲೆ ಒಣಗಿ ಹಾಕಿದ ಬಟ್ಟೆಗಳನ್ನು ಕೂಡ ಹೊತ್ತೊಯ್ಯುತ್ತಿವೆ. ಮನೆಯಂಗಳದಲ್ಲಿ ಬೆಳೆಸಿರುವ ತೆಂಗಿನ ಮರಗಳನ್ನೇರಿ ಎಳನೀರನ್ನು ಕುಡಿಯುತ್ತಿವೆ. ಮರದ ಮೇಲಿನ ಬಲಿತ ತೆಂಗಿನ ಕಾಯಿಯನ್ನು ಕಿತ್ತು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಎಂದು ಗೃಹಿಣಿ ಶರಾವತಿ, ಹರ್ಷಿತಾ, ಗೌರಮ್ಮ ಮೊದಲಾದವರು ಸ್ಥಳಕ್ಕೆ ತೆರಳಿದ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. -ಮೂರ್ತಿ