ಸೋಮವಾರಪೇಟೆ, ಮಾ. ೨೧: ಸರ್ಕಾರದಿಂದ ಬಿಡುಗಡೆಯಾಗುವ ಕೋಟ್ಯಾಂತರ ಅನುದಾನದಡಿ ತಾಲೂಕು ಲೋಕೋಪಯೋಗಿ ಉಪವಿಭಾಗದ ಮೂಲಕ ನಡೆಯುತ್ತಿ ರುವ ರಸ್ತೆ ಮತ್ತು ತಡೆಗೋಡೆ ಕಾಮಗಾರಿಗಳು ಕಳಪೆಯಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿ ವಿವಿಧ ಗ್ರಾಮಗಳ ಗ್ರಾಮಸ್ಥರು ಇಲ್ಲಿನ ಲೋಕೋಪ ಯೋಗಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಾಲೂಕಿನಾದ್ಯಂತ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಇಂಜಿನಿಯರ್‌ಗಳು ಸ್ಥಳ ಪರಿಶೀಲಿಸುತ್ತಿಲ್ಲ. ಕೆಲವೊಂದು ಗುತ್ತಿಗೆದಾರರು ಕಳಪೆ ಕಾಮಗಾರಿ ಯನ್ನು ಪ್ರಶ್ನಿಸುವವರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೊಡ್ಲಿಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಪ್ರಶ್ನಿಸಿದ ಆರ್.ಟಿ.ಐ ಕಾರ್ಯಕರ್ತರೋರ್ವರ ಮೇಲೆ ಗುತ್ತಿಗೆದಾರ ಹಲ್ಲೆ ನಡೆಸಿದ್ದಾರೆ. ತನ್ನ ಕಾರ್ಮಿಕನನ್ನು ಮುಂದಿಟ್ಟು ಕೊಂಡು ಜಾತಿ ನಿಂದನೆ ಮಾಡಿದ್ದಾರೆ ಎಂದು ಸುಳ್ಳು ದೂರು ಕೊಡಲು ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು-ಜಾಲ್ಸೂರು ರಸ್ತೆ ಕಾಮಗಾರಿ ೨೦೧೫ರಲ್ಲಿ ನಡೆದಿತ್ತು. ಆಗ ನಿರ್ಮಿಸಿದ್ದ ತಡೆಗೋಡೆ ಕುಸಿದಿದ್ದು, ಇದುವರೆಗೂ ಅಧಿಕಾರಿಗಳನ್ನು ಹಾಗೂ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ೨೦೧೮ರಲ್ಲಿ ಕೊಡಗು ಪ್ಯಾಕೇಜ್‌ನಲ್ಲಿ ಕಾಮಗಾರಿ ನಡೆಸದೆ ಬಿಲ್ ಪಡೆದುಕೊಂಡಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಬಗ್ಗನ ಅನಿಲ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಶಾಂತಳ್ಳಿ-ಬೀದಳ್ಳಿ-ಕುಮಾರಳ್ಳಿ-ಪುಷ್ಪಗಿರಿ ರಸ್ತೆ ೨೦೧೮ರಲ್ಲಿ ಟೆಂಡರ್ ಆಗಿದ್ದು, ನಿನ್ನೆಯಿಂದ ಕೆಲಸ ಪ್ರಾರಂಭಿಸಿದ್ದಾರೆ. ಸ್ಥಳೀಯ ಆಲೆಕಟ್ಟೆ ರಸ್ತೆ ಸಮೀಪ ಕಾಂಕ್ರೀಟ್ ರಸ್ತೆ ಕಾಮಗಾರಿ ವ್ಯವಸ್ಥಿತವಾಗಿ ನಡೆಯುತ್ತಿಲ್ಲ.

ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ತಡೆಗೋಡೆ ಕೇವಲ ಮೂರು ತಿಂಗಳಲ್ಲಿ ಕುಸಿದಿದೆ. ೨೦೧೯-೨೦ನೇ ಸಾಲಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆ ಮತ್ತು ಇತರೆ ರಸ್ತೆಗಳ ನಿರ್ವಹಣೆ ಯೋಜನೆ ಯಡಿ ಮಾಡಿರುವ ಕಾಮಗಾರಿಗಳಲ್ಲಿ ಕೋಟ್ಯಂತರ ರೂ. ಗಳ ಅವ್ಯವಹಾರ ನಡೆದಿದ್ದು, ಇದನ್ನು ತನಿಖೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಈ ಸಂದರ್ಭ ಮನವಿ ಸ್ವೀಕಾರ ಮಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಕುಮಾರ್ ಮಾತನಾಡಿ, ಮುಂದಿನ ೨೦ ದಿನಗಳ ಒಳಗೆ ಕ್ರಿಯಾಯೋಜನೆಯಲ್ಲಿ ನಮೂದಿಸಿರುವಂತೆ ಕಾಮಗಾರಿ ಕೈಗೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಸಂಜಯ್ ಜೀವಿಜಯ, ಎಸ್.ಬಿ. ಭರತ್ ಕುಮಾರ್, ಸಿ.ಎಸ್. ನಾಗರಾಜ್, ಬಿ.ಜಿ. ಪ್ರಶಾಂತ್, ಹೆಚ್.ಆರ್. ಸುರೇಶ್, ಶುಂಠಿ ಸುರೇಶ್, ಕೆ.ಟಿ. ಪರಮೇಶ್, ಬಗ್ಗನ ಪೊನ್ನಪ್ಪ, ಮಾಟ್ನಳ್ಳಿ ಜಯರಾಮ್, ತ್ರಿಶೂಲ್, ಕಿರಗಂದೂರು ಶಿವಕುಮಾರ್, ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಮತ್ತಿತರರು ಭಾಗವಹಿಸಿದ್ದರು.