ಮಡಿಕೇರಿ, ಮಾ. ೨೧: ಮಡಿಕೇರಿ ನಗರವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಎರಡು ದಿನಗಳ ಕಾಲ ಉದ್ದಿಮೆ ಪರವಾನಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿ.ಟಿ. ವೃತ್ತ ಹಾಗೂ ಐ.ಜಿ. ವೃತ್ತದಲ್ಲಿ ಅಭಿಯಾನ ಕೇಂದ್ರಗಳನ್ನು ತೆರೆಯಲಾಗಿದೆ.
ಪರವಾನಗಿ ಇಲ್ಲದೆ ವ್ಯಾಪಾರ ಮಾಡುತ್ತಿರುವವರು, ಪರವಾನಗಿ ಯನ್ನು ನವೀಕರಿಸಿ ಕೊಳ್ಳದವರು ಈ ಅಭಿಯಾನದ ಮೂಲಕ ಅರ್ಜಿ ಪಡೆದು ನೂತನ ಪರವಾನಗಿ ಹಾಗೂ ನವೀಕರಣವನ್ನು ಮಾಡಿಸಿ ಕೊಳ್ಳಬಹುದಾಗಿದೆ. ಅಭಿಯಾನದ ಕುರಿತು ಮಾಹಿತಿ ನೀಡಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಆಯುಕ್ತ ರಾಮದಾಸ್ ಇವರುಗಳು, ವ್ಯಾಪಾರೋದ್ಯಮಿಗಳು ಈ ಅಭಿಯಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಒಂದು ವೇಳೆ ಪರವಾನಗಿ ಪಡೆಯದೆ, ಪರವಾನಗಿ ನವೀಕರಿಸಿ ಕೊಳ್ಳದಿರುವುದು ಕಂಡುಬAದರೆ ಅಂತಹ ಉದ್ದಿಮೆಗಳಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಉದ್ಯಮ್ ನೋಂದಣಿ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ನಗರಸಭೆಯ ಉದ್ಯಮ ಪರವಾನಗಿ ಅನ್ವಯವಾಗುವುದಿಲ್ಲ. ಇದರಿಂದ ಹೊರತಾಗಿರುವ ಉದ್ದಿಮೆದಾರರು ನಗರಸಭೆಯಿಂದ ಪರವಾನಗಿ ಪಡೆದುಕೊಳ್ಳಬೇಕೆಂದು ಆಯುಕ್ತ ರಾಮದಾಸ್ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್ ಹಾಜರಿದ್ದರು.