ಸೋಮವಾರಪೇಟೆ, ಮಾ. ೨೦: ಲೌಕಿಕ ವಿದ್ಯೆಗಿಂತಲೂ ಪರ ಮಾರ್ಥಿಕ ವಿದ್ಯೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಸಾರಿದ ಕೈವಾರ ತಾತಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವು ದರೊಂದಿಗೆ ಕಾಲಜ್ಞಾನಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಹಶೀಲ್ದಾರ್ ಗೋವಿಂದರಾಜ್ ಅಭಿಪ್ರಾಯಿಸಿದರು.
ಸರಕಾರ ಕೈವಾರ ತಾತಯ್ಯನವರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕೊಡಗು ಬಲಿಜ ಸಮಾಜದ ವತಿಯಿಂದ ಜಿಲ್ಲೆಯ ಹತ್ತಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಯೋಗಿ ನಾರಾಯಣ ಯತೀಂದ್ರರವರ ಜಯಂತಿಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆಧ್ಯಾತ್ಮಿಕತೆಯೊಂದಿಗೆ ಕನ್ನಡ ಹಾಗೂ ತೆಲುಗು ಭಾಷೆಯ ಮೂಲಕ ಹಲವಾರು ಕೀರ್ತನೆ ಗಳನ್ನು ರಚಿಸಿದ ಮತ್ತು ಮರುಸೃಷ್ಠಿಯ ಶಕ್ತಿಯನ್ನು ಪಡೆದಿದ್ದ ಕೈವಾರ ತಾತಯ್ಯನವರ ಜಯಂತಿ ಯನ್ನು ಸರಕಾರ ಆಚರಣೆ ಮಾಡಲು ಮುಂದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಅನುದಾನ ಬಿಡುಗಡೆ ಯಾಗಲಿದೆ. ಬಲಿಜ ಸಮಾಜದವರು ಎಲ್ಲಾ ವರ್ಗದವರ ಸಹಕಾರ ದೊಂದಿಗೆ ಉತ್ತಮ ಕಾರ್ಯಕ್ರಮ ಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು.
ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಅಂದಾಜು ೮,೫೦೦ ಜನರಿದ್ದು, ಮುಂದಿನ ದಿನಗಳಲ್ಲಿ ಜನಗಣತಿಯನ್ನು ಮಾಡಿದ ನಂತರ ಮಾಹಿತಿ ನೀಡಲಾಗುವುದು. ಸಮುದಾಯದವರು ಶಿಕ್ಷಣದಲ್ಲಿ ಇನ್ನಷ್ಟೂ ಮುನ್ನೆಲೆಗೆ ಬರಬೇಕಾಗಿದೆ. ಸರಕಾರದಿಂದ ದೊರಕುವ ಸೌಲಭ್ಯ ಗಳನ್ನು ಪಡೆಯಲು ಮುಂದಾಗ ಬೇಕು. ಮುಂದಿನ ದಿನಗಳಲ್ಲಿ ಸಂಘಟಿತರಾಗಿ ಜಿಲ್ಲೆಯಾದ್ಯಂತ ಕೆಲಸ ಮಾಡಬೇಕಿದೆ ಎಂದು ಮನವಿ ಮಾಡಿದರು.
ಕೈವಾರ ತಾತಯ್ಯನವರ ಕುರಿತು ಸಮಾಜದ ಹಿರಿಯರಾದ ಟಿ.ಸಿ. ರಾಮಪ್ಪ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ಮುಖಂಡರಾದ ಟಿ.ಎ. ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಉಪಸ್ಥಿತರಿದ್ದರು.