ಮನುಷ್ಯ ತಾನು ನೆಮ್ಮದಿಯಾಗಿ ಬದುಕಲು ತನಗೆ ಬೇಕಾದ ಕುಡಿಯುವ ನೀರು, ಆಹಾರ, ಉಸಿರಾಡಲು ಪರಿಶುದ್ಧವಾದ ಗಾಳಿ, ಮನಕ್ಕೆ ತಂಪು ಹಾಗೂ ಕಣ್ಣುಗಳಿಗೆ ಇಂಪು ನೀಡುವ ಮೂಲಕ ಎಲ್ಲರನ್ನು ಪೊರೆಯುವ ಕಾಮಧೇನು ಅರಣ್ಯ.
ಅರಣ್ಯದ ಪ್ರಮಾಣ ಏನಾದರೂ ಕ್ಷೀಣಿಸಿದಲ್ಲಿ ಮನುಷ್ಯನ ಅಧಃಪತನಕ್ಕೆ ಮುನ್ನುಡಿ ಬರೆದಂತೆಯೇ ಸರಿ. ಜನಸಂಖ್ಯೆ ಹೆಚ್ಚಳವಾದಂತೆಯೇ ಜನರ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಸರ್ಕಾರಗಳು ಅಭಿವೃದ್ಧಿ ಹೆಸರಲ್ಲಿ ಅರಣ್ಯವನ್ನು ನಾಶ ಮಾಡುತ್ತಲೇ ಇವೆ.
ಅರಣ್ಯ ಸಂಕುಲ ನಾಶದ ಹಾದಿ ತುಳಿದಂತೆಯೇ ಹವಾಮಾನದಲ್ಲಿ ವೈಪರಿತ್ಯಗಳು ಘಟಿಸುತ್ತಿವೆ. ಇವು ಮಾನವನ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಹಾಗಾಗಿ ಅರಣ್ಯ ಸಂರಕ್ಷಣೆ ಹಾಗೂ ಪೋಷಣೆ ಪ್ರಸ್ತುತದ ಮಾನವ ಜಗತ್ತಿಗೆ ತುರ್ತು ಅನಿವಾರ್ಯವಾಗಿದೆ. ನಾವು ಅರಣ್ಯ ಸಂಕುಲಕ್ಕೆ ಏನನ್ನೂ ಕೊಡದಿದ್ದರೂ ಕೂಡ, ಕ್ಷಣ ಕ್ಷಣವೂ ನಮಗೆ ಅದು ಜೀವ ಚೈತನ್ಯ ನೀಡುತ್ತಿದೆ.
ಅರಣ್ಯವಿಲ್ಲದಿದ್ದರೆ ಮಳೆ ಬರುವುದಾದರೂ ಹೇಗೆ? ಹಾಗಾಗಿ ನಮಗೆ ಕುಡಿಯುವ ನೀರು, ಮನಕ್ಕೆ ನೆಮ್ಮದಿ - ಉಲ್ಲಾಸ ಹಾಗೂ ಸಂತಸ ಎಲ್ಲವನ್ನು ನೀಡುವ ಶಕ್ತಿ ಅರಣ್ಯಕ್ಕಿದೆ.
ಅರಣ್ಯಕ್ಕೆ ಮನುಷ್ಯ ತಾನು ಏನೂ ಕೂಡ ಮಾಡದಿದ್ದರೂ ಪರವಾಗಿಲ್ಲ. ಅದರೊಳಗೆ ಆತ ಕಟುಕನಾಗಿ ಪ್ರವೇಶ ಮಾಡದಂತೆ ಸುಮ್ಮನಿದ್ದರೆ ಸಾಕು. ಅರಣ್ಯದೊಳಕ್ಕೆ ತಾನು ಅಕ್ರಮ ಪ್ರವೇಶ ಮಾಡುವ ಮೂಲಕ ತನ್ನ ಭೋಗಕ್ಕೆ ಬೇಕಾದ ಮರಗಳನ್ನು ಕಡಿದು ಸಾಗಿಸುವುದು, ತಾನು ಸಾಕಿರುವ ಜಾನುವಾರುಗಳು ಅಥವಾ ಸಾಕುಪ್ರಾಣಿಗಳನ್ನು ಅದರೊಳಗೆ ಬಿಡದಂತೆ ದೂರವಿದ್ದರೆ ಅರಣ್ಯ ತನಗೆ ಬೇಕಾದ್ದನ್ನು ತನಗೆ ತಾನೇ ಸೃಷ್ಟಿಸಿಕೊಳ್ಳುತ್ತದೆ.
ಅರಣ್ಯದೊಳಗೆ ಮೌನಿಯಾಗು
ಸದಾ ತನ್ನದೇ ತಾಳ ಮೇಳಗಳೊಂದಿಗೆ ನರ್ತಿಸುವ ಅರಣ್ಯದೊಳಗೆ ತೆರಳಿ ಮೌನದಿ ಹೆಜ್ಜೆ ಇಡುತ್ತಾ ಸಾಗುತ್ತಿದ್ದರೆ. ಅರಣ್ಯದೊಳಗೆ ಶುದ್ಧವಾಗಿ ಹರಿಯುವ ನದಿಯ ನೀರು ನಮ್ಮನ್ನು ಕೂಡ ಶುದ್ಧವಾಗಿಸುತ್ತದೆ.
ಅಲ್ಲಿ ಕಾನನದೊಳಗೆ ನಿಂತು ನೋಡುವ ನೀಲಾಕಾಶ ಹೇಳುತ್ತದೆ... ಹೇ ಮನುಜ, ನೋಡು ಬದುಕೆಷ್ಟು ಶುಭ್ರವಾಗಿದೆ. ನಿನ್ನಲ್ಲಿನ ಕಲುಷಿತ ಆಲೋಚನೆಗಳಿಂದ ಮಲಿನ ಮಾಡಿಕೊಂಡಿರುವ ಆ ನಿನ್ನ ಮನಸ್ಸನ್ನು ನನ್ನ ಜೊತೆ ಬಂದು ಶುಭ್ರವಾಗಿಸಿಕೊ ಎನ್ನುತ್ತದೆ.
ಹಾಗೆಯೇ ಗಿಡ ಮರಗಳು ಹೆಣೆದುಕೊಂಡು ಕಾಣುವ ಕಾಡಿನ ಸುಂದರ ಪರಿಸರವನ್ನು ಕಣ್ತುಂಬಿಕೊAಡು ಸಾಗುತ್ತಿದ್ದಂತೆಯೇ ಕಾವ್ಯ, ಕಲೆ, ಸಾಹಿತ್ಯ, ಸಂಗೀತ ಎಲ್ಲವೂ ಒಮ್ಮೆಲೆ ಮಿಳಿತಗೊಂಡು ಅಲ್ಲೊಂದು ಕವಿತ್ವ ಉದಯಿಸುತ್ತದೆ.
ಕಾಡಿನ ಮೌನ ಆ ಕವಿತ್ವದ ಮನದವನ ಜೊತೆ ಮಾತಿಗೆ ಜಾರುತ್ತದೆ. ಕಾನನದೊಳಗಿನ ಹಳ್ಳ ಕೊಳ್ಳ ತೊರೆ ನದಿಗಳಲ್ಲಿ ಹರಿವ ನೀರಲ್ಲಿ ನಿಸರ್ಗವೇ ರೂಪಿಸಿರುವ ಅದರದೇ ಆದ ಸಂಗೀತದ ಆಲಾಪನವಿರುತ್ತದೆ.
ಸುಯ್ ಎಂದು ಕಿವಿಗಪ್ಪಳಿಸಿ ತೇಲಿ ಸಾಗುವ ಗಾಳಿಯ ನಿನಾದ, ರೆಕ್ಕೆ ಬಡಿದು ಹಾರುವ ಹಕ್ಕಿಯ ಸದ್ದಿನ ಮಾತು, ಮರಗಳ ಮೇಲಿಂದ ಕೆಳಗೆ ಜಾರಿ ಬೀಳುವ ಒಣಗಿದ ಎಲೆಗಳ ಸದ್ದು ಎಲ್ಲವೂ ಮೌನದ ಹಾದಿಯಲ್ಲಿ ಮಿಳಿತವಾಗುತ್ತವೆ.
ಏನೇ ಇರಲಿ, ಅರಣ್ಯವನ್ನು ಇಂದಿನ ಪೀಳಿಗೆ ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರಿಸುವAತಾಗಬೇಕೇ ಹೊರತು ನಗರೀಕರಣದ ಹೆಸರಲ್ಲಿ ಹನನ ಮಾಡದಂತೆ ಸರ್ಕಾರಗಳು ದಿಟ್ಟ ಕ್ರಮ ಕೈಗೊಳ್ಳಬೇಕಿದೆ. ಪಶ್ಚಿಮಘಟ್ಟ ಸಾಲುಗಳು ವಿಶ್ವದಲ್ಲಿಯೇ ಅದ್ವಿತೀಯವಾದ ಅರಣ್ಯ ಪರಿಸರವಾಗಿದ್ದು, ದಕ್ಷಿಣ ಭಾರತದ ಅನೇಕ ರಾಜ್ಯಗಳ ಕೋಟ್ಯಾಂತರ ಮಂದಿಗೆ ಶುದ್ಧ ಆಮ್ಲಜನಕವನ್ನು ನೀಡುತ್ತಿದೆ.
ತಾ. ೨೧ ರಂದು (ಇಂದು) ವಿಶ್ವ ಅರಣ್ಯ ದಿನದ ಈ ಹೊತ್ತಿನಲ್ಲಿ ಇಂದಿನ ಮಕ್ಕಳಿಗೆ ಅರಣ್ಯ ಹಾಗೂ ಪರಿಸರದ ಮಹತ್ವದ ಕುರಿತು ಹೆಚ್ಚಿನ ತಿಳುವಳಿಕೆ ನೀಡುವ ಮೂಲಕ ಗಿಡ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ವೃಕ್ಷಾಂದೋಲನವಾಗಬೇಕಿದೆ.
- ಕೆ.ಎಸ್. ಮೂರ್ತಿ