ಪೊನ್ನಂಪೇಟೆ, ಮಾ. ೨೦: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿ ಸೆಲ್‌ನ ಸಂಯುಕ್ತಾಶ್ರಯದಲ್ಲಿ ಅಸ್ತಿತ್ವಕ್ಕೆ ತರಲಾಗಿರುವ ಸ್ವ-ಉದ್ಯೋಗಂ ವಾಣಿಜ್ಯೋದ್ಯಮ ಕೋಶದ ಉದ್ಘಾಟನೆಯನ್ನು ನರಿಶೆಲೈಟ್ ಡೈವರ್ಸಿಟೀಸ್ ಲಿಮಿಟೆಡ್‌ನ ಸಂಸ್ಥಾಪಕಿ ಡಾ. ಅರ್ಚನಾ ಮುತ್ತಣ್ಣ ನೆರವೇರಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ತಮ್ಮದೇ ಆದ ವ್ಯಾಪಾರ ಕಲ್ಪನೆಗಳೊಂದಿಗೆ ಮುಂದುವರೆಯುವAತೆ ಸಲಹೆ ನೀಡಿ, ವಾಣಿಜ್ಯೋದ್ಯಮ ಕ್ಷೇತ್ರಕ್ಕೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳು ಮತ್ತು ನಿಧಿಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಕೊಡಗಿನ ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವ್ಯಾಪಾರ ರಸಪ್ರಶ್ನೆ, ಎಲಿವೇಟರ್ ಪಿಚ್, ಉತ್ಪನ್ನ ಮಾರಾಟ ಮತ್ತು ಮಾದರಿ ತಯಾರಿಕೆ ಸ್ಪರ್ಧೆಗಳನ್ನು ನಡೆಸಲಾಯಿತು. ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರಾಂಶುಪಾಲ ಪ್ರೊ. ಎಂ.ಬಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ. ನಯನ ತಮ್ಮಯ್ಯ, ಕಾರ್ಯಕ್ರಮ ಸಂಚಾಲಕಿ ಸಿ.ಸಿ.ಪೊನ್ನಮ್ಮ ಹಾಗೂ ಉಪನ್ಯಾಸಕರು ಹಾಜರಿದ್ದರು.