ಮಡಿಕೇರಿ, ಮಾ. ೨೦: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ನಗರದ ಕೈಗಾರಿಕಾ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಉದ್ಯಮಶೀಲತಾ ಅರಿವು ಕಾರ್ಯಾಗಾರ ನಡೆಯಿತು.

ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಜನರ ಬದುಕಿನಲ್ಲಿ ಕತ್ತಲೆಯ ದರ್ಶನ ವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾವಂತರು ಮತ್ತು ಕೆಲಸ ಕಳೆದುಕೊಂಡವರಿಗೆ ಮುಂದೇನು ಮಾಡಬಹುದು ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಉದ್ಯಮಶೀಲತಾ ಅರಿವು ಕಾರ್ಯಾಗಾರ ಸಹಕಾರಿ ಆಗಿದೆ ಎಂದರು.

ಪ್ರಸ್ತುತ ದಿನದಲ್ಲಿ ಕೊರೊನಾ ಅಲೆ ಕಡಿಮೆ ಆಗಿದೆ. ಆದರೂ ಪೂರ್ವದ ಕೆಲವು ರಾಷ್ಟçಗಳಲ್ಲಿ ಕೋವಿಡ್-೧೯ ನಾಲ್ಕನೆ ಅಲೆ ಆರಂಭವಾಗಿದೆ. ಜೊತೆಗೆ ಯುದ್ಧ ಭೀತಿ ಆವರಿಸುತ್ತಿದೆ. ಮುಂದಿನ ದಿನಗಳಲ್ಲಿ ಯುದ್ದದ ಪರಿಣಾಮಗಳು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಊಹಿಸುವುದು ಅಸಾಧ್ಯ ಎಂದರು.

ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಶಂಕರ್ ನಾರಾಯಣ್ ಅವರು ಮಾತನಾಡಿ, ವಿದ್ಯಾವಂತರಿಗೆ ಪ್ರಸ್ತುತ ದಿನದಲ್ಲಿ ಕೆಲಸವಿಲ್ಲ. ಕೋವಿಡ್ ಬಂದ ಬಳಿಕ ಅನೇಕ ಜನರು ಇದ್ದ ಕೆಲಸವನ್ನು ಕಳೆದುಕೊಂಡರು. ವಿದ್ಯಾಭ್ಯಾಸ ಮುಗಿದ ಮೇಲೆ ಮುಂದೇನು ಎನ್ನುವುದಕ್ಕೆ ಸಹಕಾರಿಯಾಗಲು ಈ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕಿ ಸುರೇಖಾ ಅವರು ಮಾತನಾಡಿ ಉದ್ಯಮಶೀಲತಾ ಅರಿವು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಬಹಳ ಸಂತೋಷವಾಗಿದೆ. ವಿದ್ಯಾವಂತರಿಗೆ ಮುಂದೇನೂ ಎಂಬ ಒಂದು ದೊಡ್ಡ ಪ್ರಶ್ನೆ ಕಾಡುತ್ತಿದೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಅಂತವರಿಗೆ ಸಹಕಾರಿಯಾಗಲಿದೆ. ಕೊರೊನಾ ಕಡಿಮೆಯಾಗಿ ಸ್ವಲ್ಪ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಯುದ್ಧದ ಕಾರ್ಮೊಡ ಆವರಿಸುತ್ತಿದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಿ ಮುಂದಕ್ಕೆ ಹೋಗಬೇಕು. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕೆಎಸ್‌ಎಫ್‌ಸಿಯ ಶಾಖಾ ವ್ಯವಸ್ಥಾಪಕ ಶಿವಣ್ಣ ಅವರು ಮಾತನಾಡಿ ಉದ್ಯೋಗಶೀಲತಾ ಶಿಬಿರದ ಮುಖ್ಯ ಉದ್ದೇಶ ಎಲ್ಲರೂ ಉದ್ಯೋಗಿಗಳಾಗಬೇಕು ಮತ್ತು ಉದ್ಯೋಗದಾತರಾಗಬೇಕು. ಮತ್ತೊಬ್ಬರಿಗೆ ಉದ್ಯೋಗ ಕಲ್ಪಿಸಿ ಉದ್ಯೋಗದಾತರು ಆಗಬೇಕು ಎಂದು ಶಿಬಿರಾರ್ಥಿಗಳಿಗೆ ಅವರು ಸಲಹೆ ಮಾಡಿದರು.

ಇಪ್ಪತ್ತು ವರ್ಷಗಳ ಹಿಂದಿನ ಕೈಗಾರಿಕೆಗಳಿಗೆ ಹೋಲಿಸಿದರೆ ಪ್ರಸ್ತುತ ದಿನದಲ್ಲಿ ಬಹಳಷ್ಟು ಬದಲಾವಣೆ ಗಳಾಗಿವೆ. ಸಾಕಷ್ಟು ಅವಕಾಶಗಳು ಪ್ರಸ್ತುತ ದಿನದಲ್ಲಿ ಸಿಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ಕಲ್ಪಿಸಲು ಬಹಳಷ್ಟು ಅವಕಾಶಗಳಿವೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗ ಬೇಕು ಎಂದು ಅವರು ಸಲಹೆ ಮಾಡಿದರು. ಉದ್ಯೋಗ ಕಲ್ಪಿಸಲು ನಮ್ಮಲ್ಲಿ ಸಾಧಿಸುವ ಛಲ, ಆಸಕ್ತಿ, ಶ್ರದ್ಧೆ, ಪರಿಶ್ರಮ ಇರಬೇಕು. ಇವುಗಳಿದ್ದರೆ ಮಾತ್ರ ಕೈಗಾರಿಕೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಅವರು ಹೇಳಿದರು.

ಎಂಎಸ್‌ಎAಇ ಸಹಾಯಕ ನಿರ್ದೇಶಕ ಸುಂದರ್ ಅವರು ಮಾತನಾಡಿ ಈ ಕಾರ್ಯಕ್ರಮವು ಕೇವಲ ಹೆಸರಿಗೆ ಮಾತ್ರ ಆಗಬಾರದು. ಆಯ್ಕೆಗಳನ್ನು ನಿರ್ಧರಿಸುವಾಗ ನಾವು ಎಡವುತ್ತಿದ್ದೇವೆ. ಅದನ್ನು ಸರಿಪಡಿಸಿ ಕೊಂಡಾಗ ಮಾತ್ರ ನಾವು ಯಶಸ್ಸು ಸಾಧಿಸಲು ಸಾಧ್ಯ ಎಂದು ನುಡಿದರು.

ಕರ್ನಾಟಕ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ಭೂಮಿಕ ಅವರು ಮಾತನಾಡಿ ಎಂಎಸ್‌ಎAಇ ಅವರಿಗೆ ಬ್ಯಾಂಕ್‌ಗಳಿAದ ಬೇಕಾದ ಸಹಾಯ ನೀಡಲಾಗುತ್ತಿದೆ. ಉದ್ಯೋಗ ಕಳೆದುಕೊಂಡವರಿಗೆ ಉದ್ಯಮಶೀಲತಾ ತರಬೇತಿಯು ಬಹಳ ಸಹಕಾರಿಯಾಗಲಿದೆ ಎಂದರು.

ಬಿಐಎಸ್‌ನ ಮುಖ್ಯಸ್ಥರು ಮತ್ತು ನಿರ್ದೇಶಕ ಅಮಿತ್ ರಾಯ್ ಮತ್ತು ಜಿಲ್ಲಾ ಕೈಗಾರಿಕಾ ಉಪ ನಿರ್ದೇಶಕ ಸಿ.ಎನ್. ರಘು ಅವರು ಉದ್ಯಮ ಶೀಲತಾ ಅರಿವು ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮತ್ತು ಇತರರು ಇದ್ದರು. ಜಿಲ್ಲಾ ಕೈಗಾರಿಕಾ ಉಪ ನಿರ್ದೇಶಕ ಸಿ.ಎನ್.ರಘು ಸ್ವಾಗತಿಸಿದರು, ಸ್ವಾತಿ, ಚಂದ್ರಕಲಾ, ಭವ್ಯ ಅವರು ಪ್ರಾಥಿಸಿದರು, ಮಿಥನ್ ಕುಮಾರ್ ಎಸ್. ನಿರೂಪಿಸಿ, ವಂದಿಸಿದರು.