ಶನಿವಾರಸಂತೆ, ಮಾ. ೨೧: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವರ ಆರಾಧನ ಮಹೋತ್ಸವ ಇಂದು ವಿಜೃಂಭಣೆಯಿAದ ನೆರವೇರಿತು. ಸುತ್ತಮುತ್ತಲ ಶನಿವಾರಸಂತೆ, ಯಸಳೂರು, ಹಾಸನ ಜಿಲ್ಲೆಯ ಸುಮಾರು ೩ ಸಾವಿರ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಪ್ರತಿ ವರ್ಷ ಶಿವರಾತ್ರಿ ಹಬ್ಬದ ನಂತರ ಹಾಗೂ ಯುಗಾದಿ ಹಬ್ಬದ ಒಳಗೆ ವಾರ್ಷಿಕ ವಿಶೇಷ ಪೂಜೆ ಇಲ್ಲಿ ನಡೆಯುತ್ತದೆ. ವರ್ಷಕ್ಕೊಮ್ಮೆ ನಡೆಯುವ ಆರಾಧನಾ ಮಹೋತ್ಸ ವದಲ್ಲಿ ಭಕ್ತಾದಿಗಳು ಹಣ್ಣುಕಾಯಿ ಪೂಜೆ ಮಾಡಿಸಿಕೊಂಡು ತೀರ್ಥ ಕೊಳಕ್ಕೆ ಹರಕೆಯ ರೂಪದಲ್ಲಿ ನಾಣ್ಯಗಳನ್ನು ಹಾಕಿ ಸಿಹಿ ನೀರಿನ ತೀರ್ಥ ತೆಗೆದುಕೊಂಡು ಹೋಗುತ್ತಾರೆ.

ಈ ತೀರ್ಥವನ್ನು ಜಾನುವಾರು ಗಳಿಗೆ ಕುಡಿಸಿದರೆ ಯಾವುದೇ ಕಾಯಿಲೆ ವಾಸಿಯಾಗುವುದು ಎಂಬ ಪ್ರತೀತಿ ಇದೆ. ಮಕ್ಕಳಿಗೆ ಮುಡಿ ತೆಗೆಯುವ ಸಂಪ್ರದಾಯವೂ ಇದೆ. ದೇವರಿಗೆ ಭಕ್ತಾದಿಗಳು ಮಾಡಿಕೊಂಡ ಹರಕೆ ಯಂತೆ ಸಾವಿರಾರು ತೆಂಗಿನ ಕಾಯಿ ಈಡುಗಾಯಿ ಹೊಡೆಯಲಾಯಿತು.

ಮಹೋತ್ಸವದ ದಿನ ಇಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜೆ ಮಾಡಿಸಿ, ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸಿದರು.

ಮಹೋತ್ಸವದ ನೇತೃತ್ವವನ್ನು ಪಂಚಾಯಿತಿ ಸದಸ್ಯ ಸಿ.ಜೆ. ಗಿರೀಶ್, ಸಿ.ಎನ್. ಪುಟ್ಟಪ್ಪ, ಸಿ.ಕೆ. ಕೋಮಾರಪ್ಪ, ಸುನಿಲ್ ಕುಮಾರ್, ದಿನೇಶ, ವಿನೋದ, ಪ್ರಥ್ವಿ, ಬೆಳ್ಳಿಯಪ್ಪ, ಗಣಪತಿ, ಚಂದ್ರಪ್ಪ, ಕುಶಾಲಪ್ಪ ಇತರರು ವಹಿಸಿದ್ದು, ಉತ್ಸಾಹಿ ಯುವಕರ ತಂಡ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮದಲ್ಲಿ ಶ್ರಮಿಸಿದರು.