ಮಡಿಕೇರಿ, ಮಾ.೧೮: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೂ.೩೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಎರಡು ಕೊಠಡಿಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಕೊಠಡಿಗಳನ್ನು ಸಮರ್ಪಕವಾಗಿ ಬಳಸಿಕೊಂಡು, ತಾವು ಉನ್ನತ ಹುದ್ದೆ, ಕೆಲಸಗಳನ್ನು ಪಡೆದು ವಾಪಸ್ಸು ಸಮಾಜಕ್ಕೆ ಸಹಕಾರ ನೀಡುವಂತಾಗಬೇಕು ಎಂದರು . ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೃಷಿಕರು, ಶಾಲಾ ಕಟ್ಟಡಕ್ಕೆ ಹಣ ನೀಡಿರುವುದು ಶ್ಲಾಘನೀಯ. ಕೃಷಿಕರು ತಮ್ಮ ಸೊಸೈಟಿ ಮೂಲಕ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇದು ಸ್ಮರಣೀಯ ಕಾರ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಂಡುಕೊಳ್ಳುವತ್ತ ಗಮನಹರಿಸಬೇಕು. ಒಳ್ಳೆಯ ಮನಸ್ಸು ಇದ್ದಲ್ಲಿ ಯಾರಾದರೂ ಸಹಾಯ, ಸಹಕಾರ ನೀಡುತ್ತಾರೆ ಎಂಬುದಕ್ಕೆ ಕೊಡಗು-ದಾವಣಗೆರೆ ಜಿಲ್ಲೆಯ ಬಾಂಧವ್ಯ ಸಾಕ್ಷಿ ಎಂದು ಅವರು ನುಡಿದರು. ತಮ್ಮ ತಂದೆ ಮತ್ತು ಸಹೋದರ ಚನ್ನಗಿರಿ ತಾಲೂಕಿನ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಸದಸ್ಯರಾಗಿದ್ದು, ಇದು ಒಂದು ರೀತಿ ಕಾಕತಾಳೀಯ ಎಂದ ಜಿಲ್ಲಾಧಿಕಾರಿ, ಒಬ್ಬರಿಗೆ ಮತ್ತೊಬ್ಬರು ಸಹಕರಿಸಿದ್ದಲ್ಲಿ, ಸಮಾಜದಲ್ಲಿ ಸಾಕಷ್ಟು ಬದಲಾವಣೆ ಮತ್ತು ಸುಧಾರಣೆ ಕಾಣಬಹುದಾಗಿದೆ ಎಂದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ ಅವರು ಮಾತನಾಡಿ, ‘ನಾವು ನಿಮಗಾಗಿ, ನೀವು ನಮಗಾಗಿ, ಎಲ್ಲರೂ ಎಲ್ಲರಿಗಾಗಿ’
(ಮೊದಲ ಪುಟದಿಂದ) ಎಂಬAತೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ ಅವರು ಮಾತನಾಡಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಪಿ.ಐ.ಶ್ರೀವಿದ್ಯಾ, ಅನೀಸ್ ಕಣ್ಮಣಿ ಜಾಯ್, ಇಂದಿನ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೆಚ್ಚಿನ ಒತ್ತು ನೀಡಿ ಅಗತ್ಯ ಸಹಕಾರ ನೀಡಿದ್ದಾರೆ ಎಂದರು.
ಚನ್ನಗಿರಿ ತಾಲೂಕಿನ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಆರ್.ಎಂ.ರವಿ ಅಜ್ಜಿಹಳ್ಳಿ ಅವರು ಮಾತನಾಡಿ ಕೊಡಗು ಜಿಲ್ಲೆಯ ಸೈನಿಕರು ದೇಶ ಸೇವೆಗಾಗಿ ದುಡಿದಿದ್ದಾರೆ. ಆ ನಿಟ್ಟಿನಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಏನಾದರೂ ಸಹಕಾರ ನೀಡಬೇಕು ಎಂಬ ಉದ್ದೇಶದಿಂದ ಪದವಿ ಪೂರ್ವ ಕಾಲೇಜಿನ ಕೊಠಡಿ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಯಿತು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕಾಲೇಜಿಗೆ ಬೇಕಿರುವ ಪೀಠೋಪಕರಣಕ್ಕೆ ೫ ಲಕ್ಷ ರೂ. ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತೆ ಜಿ.ಆರ್ ಪ್ರಜ್ಞಾ ಅವರು ಮಾತನಾಡಿ, ೨೦೧೮ ರಲ್ಲಿ ಕಾಲೇಜಿನ ಪರಿಸ್ಥಿತಿ ಅಯೋಮಯವಾಗಿತ್ತು. ಆದರೆ, ಕಾಲೇಜಿನ ಪ್ರಾಂಶುಪಾಲ ವಿಜಯ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದಾಗಿ ಕಳೆದ ೪ ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು. ವಿದ್ಯಾರ್ಥಿಗಳು ರಾಜಕೀಯ ಪ್ರೇರಿತ ಹೋರಾಟಗಳಲ್ಲಿ ತಮ್ಮನ್ನು ತೊಡಸಿಕೊಳ್ಳದೇ ಓದು, ಶಿಕ್ಷಣದೆಡೆಗೆ ಹೆಚ್ಚಿನ ಆಸಕ್ತಿ ನೀಡಬೇಕೆಂದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು ಮಾತನಾಡಿದರು.
ಸಮಾರಂಭದಲ್ಲಿ ಪತ್ರಕರ್ತೆ ಜಿ.ಆರ್ ಪ್ರಜ್ಞಾ, ಚನ್ನಗಿರಿ ತಾಲೂಕು ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಎಚ್.ಎಸ್. ಶಿವಕುಮಾರ್, ಪಿ.ವಿ. ರಾಜು, ಕೆ.ವಿ.ಸಂತೋಷ್, ಎಂ.ಸಿ. ದೇವರಾಜ, ಜಿ.ಸಿ. ಶಿವಕುಮಾರ್, ಜಿ.ಆರ್. ಶಿವಕುಮಾರ್, ಸಿ.ಮಲ್ಲಪ್ಪ, ಎ.ಎಂ. ಚಂದ್ರಶೇಖರಪ್ಪ, ಆರ್.ಕೆಂಚಪ್ಪ, ಎನ್. ಗಂಗಾದರಪ್ಪ, ರಮೇಶ್ ನಾಯಕ್, ಎಂ.ಎಸ್. ದೇವೇಂದ್ರಪ್ಪ, ಆರ್. ಪಾರ್ವತಮ್ಮ, ಜಿ.ಆರ್.ಪ್ರೇಮ ಲೋಕೇಶಪ್ಪ, ಎನ್.ಪಿ. ಮಧು, ಅವರುಗಳನ್ನು ಸನ್ಮಾನಿಸಲಾಯಿತು. ಲೋಕೇಶ್ ನಾಯಕ್ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಚಿದಾನಂದ ವಂದಿಸಿದರು.