ಕಣಿವೆ, ಮಾ. ೧೮: ವಿದ್ಯಾರ್ಥಿ ಜೀವನದಲ್ಲಿ ದೊರಕುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುಂದುವರಿದಾಗ ಯಶಸ್ಸು ದೊರಕಲು ಸಾಧ್ಯ ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್, ಸ್ಟೂಡೆಂಟ್ ಪೊಲೀಸ್ ಕೆಡೆಟ್, ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗದ) ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಹಾಗೂ ಹಿರಿಯರ ಬಗ್ಗೆ ಗೌರವ ಹೊಂದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಹೆಚ್ಚು ಒತ್ತು ನೀಡಬೇಕು. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಮಾನವೀಯ ಮೌಲ್ಯಗಳು, ದೇಶದ ಸುರಕ್ಷತೆ, ಪರಿಸರ ಸಂರಕ್ಷಣೆಯ ಕಾಳಜಿ ವಹಿಸಬೇಕು ಎಂದರು. ನಂತರ ಹಾಸನ ಜಿಲ್ಲೆಯ ವೃತ್ತ ನಿರೀಕ್ಷಕ ಮಹಾಂತೇಶ್, ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ದೇಶ ಸೇವೆ ಹಾಗೂ ಸಾಮಾಜಿಕ ಸೇವೆ ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಮಕ್ಕಳನ್ನು ಪ್ರಜ್ಞಾವಂತ ನಾಗರೀಕರನ್ನಾಗಿ ರೂಪುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಅನ್ನು ಜಾರಿಗೆ ತಂದಿದೆ ಎಂದರು.
ನAತರ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನ ಸಿ.ಪಿ.ಒ ಸದಾಶಿವಯ್ಯ ಎಸ್. ಪಲ್ಲೇದ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಅರಿವು, ನಾಯಕತ್ವ ಗುಣ, ನಾಗರೀಕ ಜ್ಞಾನ ಮೂಡಿಸುವ ಉದ್ದೇಶದಿಂದ ೨೦೧೪ ರಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಮಕ್ಕಳಲ್ಲಿ ಧೈರ್ಯ, ಸನ್ನಡತೆ, ಸೇರಿದಂತೆ ಕಾನೂನಿನ ಅರಿವನ್ನು ಮೂಡಿಸಲಾಗುತ್ತಿದೆ ಎಂದರು. ಇದೇ ಸಂದರ್ಭ ಸ್ಟೂಡೆಂಟ್ ಪೊಲೀಸ್ ಕೆಡೆಟ್‌ನ ತರಬೇತುದಾರ ಪ್ರದೀಪ್ ಹಾಗೂ ವೃತ್ತ ನಿರೀಕ್ಷಕ ಮಹಾಂತೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸ.ಪ.ಪೂ ಕಾಲೇಜು ಪ್ರೌಢಶಾಲೆಯ ಉಪಪ್ರಾಂಶುಪಾಲ, ಪರಮೇಶ್ವರಪ್ಪ, ಡಯಟ್ ಪ್ರಾಂಶುಪಾಲ ರಂಗನಾಥಸ್ವಾಮಿ, ಉಪನ್ಯಾಸಕ ಸಿದ್ದೇಶ್, ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಪ್ಪಾಜಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ವಸಂತ್‌ಕುಮಾರ್, ಎಸ್.ಡಿ.ಎಂ.ಸಿ. ಸದಸ್ಯ ಆದಂ, ಶಿಕ್ಷಕರಾದ ಉ.ರಾ. ನಾಗೇಶ್, ಮಹೇಂದ್ರ, ರಶ್ಮಿ, ನಂದಿನಿ ಮತ್ತಿತರರು ಹಾಜರಿದ್ದರು.